ಏಲಿಯನ್‌ಗೆ ಸ್ಪೆಷಲ್ ಕಬಾಬ್ ಕಳಿಸಿದ ಟರ್ಕಿಯ ಶೆಫ್ !
ಆಕಾಶದೆತ್ತರಕ್ಕೆ ಕನಸು ಕಾಣುವುದು ಎಂಬ ವಾಕ್ಯವನ್ನು ಕೇಳಿರುತ್ತೀರಿ, ಆದರೆ ಆ ಕನಸನ್ನು ಅಕ್ಷರಶಃ ನನಸು ಮಾಡ ಹೊರಟವರ ಬಗ್ಗೆ ಕೇಳಿದ್ದೀರಾ ? ಹೌದು ಈ ಕೆಲಸಕ್ಕೆ ಟರ್ಕಿಯ ಕಬಾಬ್ ಅಂಗಡಿಯ ಮಾಲೀಕನೊಬ್ಬ ರೆಡಿಯಾಗಿದ್ದಾರೆ. ಅಂತರಿಕ್ಷಕ್ಕೆ ತನ್ನ ಕನಸನ್ನು ಪಾರ್ಸೆಲ್ ಮಾಡಿದ್ದಾರೆ.
ಆತ ಮಾಡಿದ ಕೆಲಸವಾದರೂ ಏನು ಅಂತೀರಾ ? ಅದೇ ಟರ್ಕಿಯ ಕಬಾಬ್ ಅಂಗಡಿ ಮಾಲೀಕ ತನ್ನ ಅಂಗಡಿಯ ಕಬಾಬನ್ನು, ಭೂಮಿಯ ಮೇಲಿನ ಯಾವುದೋ ದೇಶಕ್ಕಲ್ಲ, ನೇರವಾಗಿ ಬಾಹ್ಯಾಕಾಶಕ್ಕೆ ಕಳುಹಿಸುವ ಪ್ರಯತ್ನ ಮಾಡಿದ್ದಾನೆ!
ಹೌದು, ಮಂಗಳವಾರ, 2022ರ ಏಪ್ರಿಲ್ 12 ರಂದು, ಶೆಫ್ ಯಾಸಿರ್ ಐದಿನ್ ಮತ್ತು ಬಾಹ್ಯಾಕಾಶ ಎಂಜಿನಿಯರಿಂಗ್ ವಿದ್ಯಾರ್ಥಿ ಇದ್ರಿಸ್ ಅಥೈರಾಕ್ ಅವರು ಹೀಲಿಯಂ ಬಲೂನ್‌ಗೆ ಪೈಪ್ ಕಬಾಬ್‌ಗಳಿದ್ದ ಬಾಕ್ಸ್‌ನ್ನು ಜೋಡಿಸಿ, ಅದನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದರು. “ನಮ್ಮ ಮಿತ್ರ ರಾಷ್ಟ್ರದ ಏಲಿಯನ್ ಪ್ರಜೆಗಳೇ ನಿಮಗಿದೋ, ಈ ಬಿಸಿಬಿಸಿ ಕಬಾಬ್” ಎಂದು ಪಾರ್ಸೆಲ್ ಡೆಲಿವರಿ ಮಾಡಿದ್ದಾರೆ.
ಟರ್ಕಿಯ ಅದಾನ್ ಪ್ರಾಂತ್ಯ ಅತ್ಯಂತ ರುಚಿಕರ ಮತ್ತು ಪ್ರಸಿದ್ಧ ಪೈಪ್ ಕಬಾಬ್‌ಗಳನ್ನು ತಯಾರಿಸುವುದಕ್ಕೆ ಹೆಸರುವಾಸಿ. ಹಾಗಾಗಿ ಅಲ್ಲಿoದಲೇ ಈ ಉಡಾವಣೆಯನ್ನು ಮಾಡಲಾಗಿದೆ. ಟರ್ಕಿಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿರುವ ಪ್ರಕಾರ, ಆ ಹೀಲಿಯಂ ಬಲೂನ್ 38 ಕಿ.ಮೀ. ಎತ್ತರವನ್ನು ತಲುಪಿದ ಬಳಿಕ ಅಂತರಿಕ್ಷದ ಉಷ್ಣತೆಗೆ ಒತ್ತಡ ಹೆಚ್ಚಿಸಿಕೊಂಡು ಸ್ಪೋಟಗೊಂಡಿದೆ. ಮತ್ತು ಅದರಲ್ಲಿದ್ದ ಕಬಾಬ್, ಹೀಲಿಯಂ ಬಲೂನಿನ ಉಡಾವಣಾ ಸ್ಥಳದಿಂದ 121 ಕಿಮೀ ದೂರದಲ್ಲಿ ಸಮುದ್ರಕ್ಕೆ ಹೋಗಿ ಬಿದ್ದಿತು. ಅದು ಸಮುದ್ರಕ್ಕೆ ಬೀಳುವ ಮೊದಲೇ ಬಾಹ್ಯಾಕಾಶ ಜೀವಿಗಳಾದ, ಹಾಗೆಂದು ನಂಬಲಾಗುತ್ತಿರುವ ಏಲಿಯನ್ ಗಳು ಹಾಗೆ ಚಿಮ್ಮಿದ ಕಬಾಬುಗಳನ್ನು ಆಕಾಶದಲ್ಲಿ ಕ್ಯಾಚ್ ಹಿಡಿದು ತಮ್ಮ ಬಾಯಿ ರುಚಿ ಮಾಡಿಕೊಂಡವಾ ಎಂಬ ಬಗ್ಗೆ ಮಾಹಿತಿ ಲಭ್ಯವಿಲ್ಲ. ಒಟ್ಟಾರೆ ಕಬಾಬ್ ಅಂತರಿಕ್ಷಕ್ಕೆ ತಲುಪಿದೆ. ತಿನ್ನುವುದು ಬಿಡುವುದು ಏಲಿಯನ್ ಗಳ ಇಷ್ಟ ಅಂತ ಕೆಲವರು ತಮಾಷೆಗಾಗಿ ಹೇಳಿದ್ದಾರೆ.!
ಹಾಗೆ ಕಬಾಬ್ ಕಳುಹಿಸಿದ್ದ ಬಾಕ್ಸಿಗೆ ಕ್ಯಾಮರಾ ಮತ್ತು ಟ್ರ್ಯಾಕಿಂಗ್ ಸಾಧನ ಅಳವಡಿಸಿದ್ದರಿಂದ ಅದರ ಉಡಾವಣೆಯಿಂದ ಹಿಡಿದು, ಆಕಾಶ ಪ್ರಯಾಣ ಮತ್ತು ಅದು ಸಮುದ್ರಕ್ಕೆ ಬಂದು ಬೀಳುವುದರ ವರೆಗಿನ ದೃಶ್ಯಗಳು ಲಭ್ಯವಿದೆ.