ಹಿಂಸಾಚಾರದಲ್ಲಿ 15 ಮಂದಿ ಮುಸ್ಲಿಮರ ಜೀವ ಉಳಿಸಿದ ಒಂಟಿ ಮಹಿಳೆ !! | ರಾಮನವಮಿ ಗಲಾಟೆಯಲ್ಲಿ ಈ ನಾರಿಯ ರಕ್ಷಣಾ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯ ಸುರಿಮಳೆ
ರಾಮನವಮಿ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದಾಗ 48 ವರ್ಷದ ಮಹಿಳೆಯೊಬ್ಬರು ಕೆಚ್ಚೆದೆಯಿಂದ ಉದ್ರಿಕ್ತರ ಗುಂಪಿನ ಮುಂದೆ ಗಟ್ಟಿಯಾಗಿ ನಿಂತು ಇತರ ಸಮುದಾಯದ 15 ಮಂದಿ ಪುರುಷರನ್ನು ರಕ್ಷಿಸಿದ ಸಾಹಸಿ ಘಟನೆಯೊಂದು ಕರೌಲಿಯಲ್ಲಿ ಬೆಳಕಿಗೆ ಬಂದಿದೆ.
ಮಧುಲಿಕಾ ತನ್ನ ಪತಿ ನಿಧನದ ನಂತರ ಕಳೆದ ಐದು ವರ್ಷಗಳಿಂದ ಕರೌಲಿಯಲ್ಲಿ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದಾರೆ. ಈ ಪ್ರದೇಶದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಮನವಮಿಯ ದಿನದಂದು ಹಿಂಸಾಚಾರ ನಡೆದಿದ್ದು ಅದರಲ್ಲಿ 15 ಮಂದಿಯ ಪ್ರಾಣ ಉಳಿಸಿದ ಕೀರ್ತಿ ಮಧುಲಿಕಾ ಅವರಿಗೆ ಸಲ್ಲುತ್ತದೆ.
ಯಾತ್ರೆ ಆರಂಭಿಸಿದಾಗ ಇದ್ದಕ್ಕಿದ್ದಂತೆ ಜನರ ಕಿರುಚಾಟ ಕೇಳಿಸಿತು. ಜನರು ಭಯದಿಂದ ಓಡುತ್ತಿದ್ದರು. ಅಂಗಡಿ ಮುಂಗಟ್ಟುಗಳ ಶಟರ್‌ಗಳನ್ನು ಕೀಳಲಾಗುತ್ತಿತ್ತು. ಶಾಪಿಂಗ್ ಕಾಂಪ್ಲೆಕ್ಸ್ ನ ಬಾಗಿಲು ಮುಚ್ಚಿ ಅಲ್ಲಿ ಅಡಗಿಕೊಳ್ಳಲು ಬಂದವರಿಗೆ ಗಾಬರಿಯಾಗಬೇಡಿ ಎಂದು ಹೇಳಿದೆ. ಮಾನವೀಯತೆಯೇ ದೊಡ್ಡ ಧರ್ಮವಾದ್ದರಿಂದ ಅವರನ್ನು ರಕ್ಷಿಸಿದ್ದೇನೆ. ಭಯದಿಂದ ತಮ್ಮ ಅಂಗಡಿಗೆ ಸುಮಾರು 15 ಮಂದಿ ಓಡಿಬಂದಿದ್ದರು.
ಅವರನ್ನು ಹೊರಗೆ ಬಿಡಬೇಕೋ ಅಥವಾ ಇಲ್ಲಿಯೆ ಉಳಿಸಿಕೊಳ್ಳಬೇಕೋ ಎಂದು ಗೊತ್ತಾಗಲಿಲ್ಲ. ಆದರೆ ಧೈರ್ಯ ಮಾಡಿ ಅವರನ್ನು ಇಲ್ಲೇ ಇರಿ ಎಂದು ಹೇಳಿದೆ. ನಂತರ ಗುಂಪೊಂದು ಗೇಟ್ ಮುರಿಯಲು ಪ್ರಯತ್ನಿಸಿತು. ಆದರೆ ಅವರು ನನ್ನನ್ನು ನೋಡಿ ಅದನ್ನು ನಿಲ್ಲಿಸಿದರು ಎಂದು ಮಧುಲಿಕಾ ಸಿಂಗ್ ಹೇಳಿದ್ದಾರೆ.
ಮಧುಲಿಕಾ ಅವರಿಂದಾಗಿ ನಮ್ಮ ಪ್ರಾಣ ಉಳಿಯಿತು ಎಂದು ಮೊಹಮ್ಮದ್ ತಾಲಿಬ್ ಮತ್ತು ದಾನಿಶ್ ಹೇಳಿದ್ದಾರೆ. ಅದೇ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಂಗಡಿಗೆ ಬೆಂಕಿ ಹಚ್ಚಿದ್ದರಿಂದ ಸಲೂನ್ ನಡೆಸುತ್ತಿರುವ ಮಿಥಿಲೇಶ್ ಸೋನಿ ಅವರು ಮತ್ತು ಇತರ ಮೂವರು ಮಹಿಳೆಯರು ಬಕೆಟ್‌ಗಳಲ್ಲಿ ನೀರು ತುಂಬಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ.