ಓರ್ವ ಪುತ್ರ ಪೊಲೀಸ್, ಮತ್ತೊಬ್ಬ ಮಗನಿಗೆ ಕೇಂದ್ರ ಸಚಿವಾಲಯದಲ್ಲಿ ಕೆಲಸ | ಆದ್ರೆ ಅವರ ಹೆತ್ತಬ್ಬೆ ಮಾತ್ರ ಹತ್ತು ವರ್ಷದಿಂದ ಕತ್ತಲೆ ಕೋಣೆಯಲ್ಲಿ ಬಂಧಿ !!

ತಾಯಿಗೆ ತನ್ನ ಮಕ್ಕಳು ಪುಟ್ಟ ಪಾಪುವಿನಿಂದ ಹಿಡಿದು ಅದೆಷ್ಟೇ ದೊಡ್ಡ ವ್ಯಕ್ತಿಯಾಗಿ ಬೆಳೆದರೂ ಆಕೆ ತೋರಿಸುವ ಪ್ರೀತಿ ಮಾತ್ರ ಒಂದೇ. ಆದ್ರೆ ಕೆಲವೊಂದು ಮಕ್ಕಳಿಗೆ ತಾಯಿಯ ಆಸರೆ ಬೆಳೆದು ನಿಲ್ಲೋವರೆಗೆ ಮಾತ್ರ. ದೊಡ್ಡ ಸ್ಥಾನದಲ್ಲಿ ಇದ್ದೇನೆ ಅಂದ್ರೆ ತನ್ನ ತಾಯಿ ಈಕೆ ಎಂದು ಹೇಳಿಕೊಳ್ಳಲು ಹಿಂದೇಟು ಹಾಕುವ ಮನಸ್ಸು.ಹೀಗೆಯೇ ಇಲ್ಲೊಂದು ಕಡೆ ಬೆಳೆದು ಉತ್ತಮವಾದ ಕೆಲಸಗಿಟ್ಟಿಸಿಕೊಂಡಿರುವ ಮಹಾನುಭಾವರು ಮಾಡಿದ್ದು ಮಾತ್ರ ನೀಚ ಕೆಲಸ!!

ಹೌದು. ಕಳೆದ 10 ವರ್ಷಗಳಿಂದ ಹೆತ್ತ ತಾಯಿಯನ್ನೇ ಮಕ್ಕಳಿಬ್ಬರು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ.ವಿಚಿತ್ರ ಅಂದ್ರೆ ಈ ಅಮ್ಮನ ಮಕ್ಕಳಲ್ಲಿ ಒಬ್ಬ ಪುತ್ರ ಪೊಲೀಸ್ ಆಗಿ ಹಾಗೂ ಮತ್ತೋರ್ವ ಪುತ್ರ ಕೇಂದ್ರ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ರೆ ತಾಯಿ ಮಾತ್ರ ಒಂದೊತ್ತು ಊಟಕ್ಕೂ ಗತಿಯಿಲ್ಲದೇ ಪ್ರಪಂಚದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದೇ ತಿಳಿಯದ ಪರಿಸ್ಥಿತಿಯಲ್ಲಿ ಇದ್ದಾಳೆ.

ಈ 62 ವರ್ಷದ ಮಹಿಳೆಯ ಇಬ್ಬರು ಪುತ್ರರು ಬೇರೆಡೆ ವಾಸಿಸುತ್ತಿದ್ದು, ಹೆತ್ತ ತಾಯಿಯನ್ನು ಒಂದು ಕೋಣೆಯಲ್ಲಿ ಕೂಡಿಹಾಕಿದ ಹೀನಾಯ ಘಟನೆ ಚೆನ್ನೈ ನಲ್ಲಿ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.ವಿಚಾರ ತಿಳಿದ ಸಮಾಜ ಕಲ್ಯಾಣ ಇಲಾಖೆ ಮಹಿಳೆಯನ್ನು ರಕ್ಷಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕತ್ತಲೆ ಕೋಣೆಯಲ್ಲಿದ್ದ ಆಕೆ ಆಹಾರ ಇಲ್ಲದಿದ್ದಾಗ ಕೂಗುತ್ತಿದ್ದಳು.ಈ ವೇಳೆ ನೆರೆಹೊರೆಯವರು ಬೀಗ ಹಾಕಿದ ಮನೆಗೆ ಬಿಸ್ಕೆಟ್ ಅಥವಾ ಹಣ್ಣುಗಳನ್ನು ಕಿಟಕಿ ಮೂಲಕ ಎಸೆಯುತ್ತಿದ್ದರು.ನೆರೆಹೊರೆಯವರಿಗೆ ಆಕೆಯ ಪರಿಸ್ಥಿತಿ ತಿಳಿದಿದ್ದರೂ,ಮಹಿಳೆ ಎಂದಿಗೂ ಯಾರೊಟ್ಟಿಗೂ ಕೂಡ ತನ್ನ ಇಬ್ಬರು ಪುತ್ರರ ವಿವರಗಳನ್ನು ಹಂಚಿಕೊಳ್ಳಲು ಧೈರ್ಯ ಮಾಡಿರಲಿಲ್ಲ.

ಸದ್ಯ ಮಹಿಳೆಯ ಕಷ್ಟ ಪಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಕೆಯನ್ನು ರಕ್ಷಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ.ಮನೆಯ ಕೀಲಿ ಕೈ ನೀಡಲು ಮಹಿಳೆಯ ಪುತ್ರರು ನಿರಾಕರಿಸಿದ್ದರಿಂದ ಪೋಲೀಸರ ನೆರವಿನೊಂದಿಗೆ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಮನೆಗೆ ನುಗ್ಗಿ ವೃದ್ಧೆಯನ್ನು ರಕ್ಷಿಸಿದ್ದಾರೆ.

ಇದೀಗ ಆಕೆಯನ್ನು ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಮಹಿಳೆಯ ಇಬ್ಬರು ಪುತ್ರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.