ಮನೆಯ ಉಯ್ಯಾಲೆ ತಂತಿಗೆ ಸಿಲುಕಿ ಬಾಲಕಿ ದಾರುಣ ಸಾವು!
ಮನೆಯಲ್ಲಿ ಮಕ್ಕಳನ್ನು ಒಬ್ಬರೇ ಆಟವಾಡಲು ಬಿಡುವ ಮುನ್ನ ಪೋಷಕರು ತುಂಬಾ ಎಚ್ಚರವಾಗಿರಬೇಕು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ಉಯ್ಯಾಲೆಯ ತಂತಿಗೆ ಸಿಲುಕಿಕೊಂಡು 11 ವರ್ಷದ ಬಾಲಕಿಯೊಬ್ಬಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮಾಗಡಿ ರಸ್ತೆಯ ಕೆಂಚನಹಳ್ಳಿಯಲ್ಲಿ ನಡೆದಿದೆ. 11 ವರ್ಷದ ಭಾವನಾ ದೀಕ್ಷಿತ್ ಮೃತಪಟ್ಟ ಬಾಲಕಿಯಾಗಿದ್ದಾಳೆ. ಡ್ಯೂಪ್ಲೆಕ್ಸ್ ಮನೆಯ ಮೊದಲ ಮಹಡಿಯಲ್ಲಿ ಭಾವನಾ ಒಬ್ಬಳೇ ಆಟವಾಡುತ್ತಿದ್ದಳು. ಪೋಷಕರು ನೆಲಮಹಡಿಯಲ್ಲಿದ್ದ ಕಾರಣ ಮಗಳು ಆಟವಾಡ್ತಿದ್ದಾಳೆ ಎಂದು ಪೊಷಕರು ತಿಳಿದು ಸುಮ್ಮನಾಗಿದ್ದರು. ಆದರೆ ತುಂಬಾ ಹೊತ್ತು ಕಳೆದರೂ ಭಾವನಾ ಕೆಳಗೆ ಬರಲಿಲ್ಲ.
ಹಲವು ಗಂಟೆಗಳಾದರೂ ಯಾವುದೇ ಶಬ್ದ ಕೇಳಿ ಬರದ ಹಿನ್ನೆಲೆ ಮಗಳನ್ನು ಕೂಗಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ, ಹೀಗಾಗಿ ಪೋಷಕರು ಗಾಬರಿಯಿಂದ ಮೇಲೆ ಹೋಗಿದ್ದಾರೆ. ಈ ವೇಳೆ ಬಾಲಕಿ ಉಯ್ಯಾಲೆಯ ತಂತಿಯಲ್ಲಿ ಸಿಲುಕಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಬಾಲಕಿಯನ್ನು ಮಾಗಡಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಮೆಡಿಕೋ-ಲೀಗಲ್ ಪ್ರಕರಣವೆಂದು ದಾಖಲು ಮಾಡಿಕೊಂಡಿರುವ ವೈದ್ಯರು, ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಆಸ್ಪತ್ರೆಗೆ ತೆರಳಿದ್ದು, ಬಾಲಕಿ ತಂದೆ ರವಿ ಕುಮಾರ್ ದೀಕ್ಷಿತ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸಿಆರ್’ಪಿಸಿಯ ಸೆಕ್ಷನ್ 174 ರ ಅಡಿಯಲ್ಲಿ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಸಾವಿಗೆ ನಿಖರವಾದ ಕಾರಣ ಮತ್ತು ಸಮಯವನ್ನು ಕಂಡುಹಿಡಿಯಲು ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಬಾಲಕಿಯ ತಂದೆಯ ಹೇಳಿಕೆಯಂತೆ ಭಾವನಾ ಅವರು ಉಯ್ಯಾಲೆಯ ಪ್ಲಾಸ್ಟಿಕ್ ತಂತಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.