ದಿನವಿಡಿ ಮೊಳಗಿದ ಕೋಲು ಕೋಲಣ್ಣ ಕೋಲೆ ಸದ್ದು..!
ಬೇಸಗೆ ಶಿಬಿರದ ಐದನೇ ದಿನ ಜನಪದೀಯ ನೃತ್ಯಕ್ಕೆ ಚಿಣ್ಣರ ಹೆಜ್ಜೆ

ಮುಕ್ಕೂರು: ಸೌರಮಾನ ಯುಗಾದಿಯೊಂದಿಗೆ ಹೊಸ ವರ್ಷದ ಮೊದಲ ದಿನವಾದ ಶುಕ್ರವಾರ ಬೇವು-ಬೆಲ್ಲದ ರುಚಿ ಸವಿಯುತ್ತ ದಿನಚರಿ ಪ್ರಾರಂಭಿಸಿದ ಚಿಣ್ಣರು ನಂತರ ಕೋಲು ಕೋಲಣ್ಣ ಕೋಲೆ ಎನ್ನುತ್ತಾ ಜನಪದೀಯ ನೃತ್ಯ ಕಲಿಕೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು..!

ಮುಕ್ಕೂರು ಉಚಿತ ಬೇಸಗೆ ಶಿಬಿರದ ಐದನೇ ದಿನ ಕಾಣಿಯೂರು ಕಣ್ವರ್ಷಿ ಕಲಾ ಕೇಂದ್ರದ ಸದಾನಂದ ಆಚಾರ್ಯ ಅವರು ಜನಪದೀಯ ನೃತ್ಯ ಕಲಿಸುವ ಮೂಲಕ ಚಿಣ್ಣರಿಗೆ ದೇಸಿಯ ಕಲೆಯ ಸೊಗಡನ್ನು ಪರಿಚಯಿಸಿದರು.


Ad Widget

Ad Widget

Ad Widget

ಪ್ರಾರಂಭದಲ್ಲಿ ಬೇವು-ಬೆಲ್ಲ ನೀಡಿ ಯುಗಾದಿಯ ಮಹತ್ವದ ಬಗ್ಗೆ ಚಿಣ್ಣರಿಗೆ ತಿಳಿಯಪಡಿಸಲಾಯಿತು. ಕೆಲ ಹೊತ್ತು ವಿದ್ಯಾರ್ಥಿಗಳು ಹಾಡು, ಕಥೆ ವಾಚಿಸುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಅನಂತರ ಜನಪದೀಯ ನೃತ್ಯ ಕಲಿಕೆ. ಶಾಲಾ ಮೈದಾನದಲ್ಲಿ ಕೋಲಾಟದ ಹಾಡಿಗೆ ಕೋಲು- ಕೋಲಿನ ಸದ್ದಿನೊಂದಿಗೆ ಹೆಜ್ಜೆ ಹಾಕಿದ ಪುಟಾಣಿಗಳ ಸಂಭ್ರಮ ಮೇರೆ ಮೀರಿತು. ಇದರ ಜತೆಗೆ ಹಾಡು, ಜನಪದ ನೃತ್ಯ ಅಭ್ಯಾಸವು ನಡೆಯಿತು. ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಶರ್ಮಿಳಾ ಕುಂಜಾಡಿ ಭೇಟಿ ನೀಡಿದರು.

ತರಬೇತಿ ಕಾರ್ಯದಲ್ಲಿ ಕಲಾವಿದ ಪದ್ಮನಾಭ ನೆಟ್ಟಾರು, ರಂಗಕರ್ಮಿ ಕೃಷ್ಣಪ್ಪ ಬಂಬಿಲ, ನೇಸರ ಯುವಕ ಮಂಡಲದ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್., ಶಿಕ್ಷಕಿ ಸರಿತಾ, ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿನಿ ನಯನಾ ಅಡ್ಯತಕಂಡ, ಏನಕಲ್ಲು ಅಂಚೆ ಪಾಲಕಿ ದೀಕ್ಷಾ ನೀರ್ಕಜೆ ಸಹಕರಿಸಿದರು.

ಅನ್ನ, ಸಾಂಬಾರು, ಪಾಯಸದ ಸವಿ

ಐದನೇ ದಿನ ಬೆಳಗ್ಗೆ ಬಿಸ್ಕೇಟ್, ಕಲ್ಲಂಗಡಿ ಜ್ಯೂಸ್, ಮಧ್ಯಾಹ್ನ ಅನ್ನ, ಸಾಂಬಾರು, ಪಾಯಸದ ಸವಿ ನೀಡಲಾಯಿತು. ಅಡುಗೆ ವಿಭಾಗದಲ್ಲಿ ಲೀಲಾವತಿ ಕುಂಡಡ್ಕ, ಸುಲೋಚನಾ ಕುಂಡಡ್ಕ, ವೆಂಕಟರಮಣ ಕುಂಡಡ್ಕ, ರಕ್ಷಿತ್ ಗೌಡ ಕಾನಾವು, ಶಶಿಕುಮಾರ್, ಜಯಂತ ಗೌಡ ಕುಂಡಡ್ಕ ಮೊದಲಾದವರು ಸಹಕರಿಸಿದರು.

Leave a Reply

error: Content is protected !!
Scroll to Top
%d bloggers like this: