‘ಜೀನ್ಸ್ ‘ ಪ್ಯಾಂಟಿನಲ್ಲಿ ಸಣ್ಣ ಪಾಕೆಟ್ ಯಾಕೆ ಇರುತ್ತದೆ…ಗೊತ್ತೇ ನಿಮಗೆ? ಇದಕ್ಕೊಂದು ಅದ್ಭುತ ಕಾರಣವಿದೆ!
ಫ್ಯಾಷನ್ ಯಾವಾಗಲೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಹೌದು..ಜನ ಕಾಲಕ್ಕೆ ತಕ್ಕ ಉಡುಗೆಗಳನ್ನು ಅಂದರೆ ಟ್ರೆಂಡ್ ಉಡುಗೆ ಧರಿಸಲು ಇಷ್ಟ ಪಡುವುದು ಸಾಮಾನ್ಯ. ಆದರೆ ಫ್ಯಾಷನ್ನಿಂದ ಹೊರಗುಳಿಯದ ಒಂದು ವಿಷಯವೆಂದರೆ ಜೀನ್ಸ್. ಎಲ್ಲರಿಗೂ ಗೊತ್ತಿರುವ ಹಾಗೇ ಕಾಲಾನಂತರದಲ್ಲಿ ಜೀನ್ಸ್ ವಿನ್ಯಾಸಗಳಲ್ಲಿ ಬದಲಾವಣೆಗಳು ಕಂಡು ಬಂದಿವೆ. ನೀವು ಸ್ನೇಹಿತರ ಜೊತೆ ಸುತ್ತಾಡಲು ಹೋಗಬೇಕೆ ಅಥವಾ ಕಾಲೇಜಿಗೆ ಹೋಗಬೇಕೆ, ಹೆಸರು ಬರುವ ಮೊದಲ ಉಡುಗೆ ಕೂಡ ಜೀನ್ಸ್ ಆಗಿದೆ. ಜೀನ್ಸ್ ಪ್ರತಿಯೊಬ್ಬ ಮನುಷ್ಯನ ಮೊದಲ ಆಯ್ಕೆ ಎಂದರೆ ತಪ್ಪಾಗಲಾರದು. ಸರಳವಾಗಿ ಕಾಣುವ ಜೀನ್ಸ್ ಇತಿಹಾಸವು ತುಂಬಾ ಆಸಕ್ತಿದಾಯಕವಾಗಿದೆ.
“ಜೀನ್ಸ್” ಎಂದು ಪ್ರಚಲಿತ ಇರುವ ಪ್ಯಾಂಟ್ಗಳ ಹಳೆಯ ಹೆಸರು Waist overalls. ಮೂಲಗಳ ಪ್ರಕಾರ, ಜೀನ್ಸ್ ನ್ನು ಕಂಡು ಹಿಡಿದವನು ಲಾಟ್ವಿಯಾದ (ಯುರೋಪ್) ಜಾಕೋಬ್ ಡೇವಿಸ್. 1800 ರ ದಶಕದ ಉತ್ತರಾರ್ಧದಲ್ಲಿ ಚಿನ್ನವನ್ನು ಹುಡುಕಲು ಅಮೆರಿಕಕ್ಕೆ ಹೋದಾಗ ಅಲ್ಲಿ ಚಿನ್ನ ಸಿಗದೇ ಹೋದಾಗ, ಹೊಸದೇನಾದರೂ ಮಾಡಬೇಕೆಂದು ಯೋಚಿಸಿದನಂತೆ ಈ ಜಾಕೋಬ್. ಆಗ ಆತನಿಗೆ ಹೊಳೆದದ್ದೇ ಈ ಚಿನ್ನದ ಗಣಿ ಗುಡಾರಗಳನ್ನು ತಯಾರಿಸಲು ಬಳಸುವ ದಪ್ಪ ಬಟ್ಟೆಯಿಂದ ಏನಾದರೂ ಮಾಡಬೇಕೆಂದು. ಹಾಗಾಗಿ ಪ್ಯಾಂಟ್ ಮಾಡಲು ಅವರು ಯೋಚಿಸಿದ.
ಈ ಬಟ್ಟೆಯನ್ನು ಮೊದಲು ಜಿನೋವಾ (ಇಟಲಿ) ನಲ್ಲಿ ತಯಾರಿಸಲಾಯಿತು. ಆದ್ದರಿಂದ ಇದನ್ನು ‘ಜೀನ್’ ಎಂದು ಕರೆಯಲಾಯಿತು. ಜಾಕೋಬ್ ಮೊದಲು ಈ ಬಟ್ಟೆಯನ್ನು ಜರ್ಮನಿಯಿಂದ ವಲಸೆ ಬಂದ 23 ವರ್ಷದ ಲೆವಿ ಸ್ಟ್ರಾಸ್ ಎಂಬಾತನಿಂದ ಖರೀದಿಸಿ ಅದರಿಂದ ಜೀನ್ಸ್ ತಯಾರಿಸಿದನಂತೆ.
ಡೇವಿಸ್ ಈ ಪ್ಯಾಂಟ್ ಅನ್ನು ತಯಾರಿಸಿದಾಗ, ಅದು ಕಾಲಾನಂತರದಲ್ಲಿ ಜನಪ್ರಿಯತೆ ಗಳಿಸಲು ಪ್ರಾರಂಭಿಸಿತು. ಸ್ವಲ್ಪ ಸಮಯದ ನಂತರ, ಡೇವಿಸ್ ಮತ್ತು ಸ್ಟ್ರಾಸ್ ಸೇರಿಕೊಂಡು ಮತ್ತು ಲೆವಿ ಸ್ಟ್ರಾಸ್ & ಕಂಪನಿಯನ್ನು ಹುಟ್ಟು ಹಾಕಿದರು.
20 ಮೇ 1873 ರಂದು, ಇಬ್ಬರೂ ತಮ್ಮ ನೀಲಿ ಜೀನ್ಸ್ ಪೇಟೆಂಟ್ ನ್ನು ಪಡೆದರು. ಜೀನ್ಸ್ ಆವಿಷ್ಕಾರವಾದ ಸುಮಾರು 70 ವರ್ಷಗಳ ನಂತರ, ಅಮೆರಿಕದ ಯುವಕರು ಜೀನ್ಸ್ ಧರಿಸಲು ಪ್ರಾರಂಭಿಸಿದರು. ಅನಂತರ ಜೀನ್ಸ್ನಲ್ಲಿ ಹೊಸತನವೊಂದು ಕಂಡು ಬಂದಿದೆ. ಕ್ರಮೇಣ ಜೀನ್ಸ್ ಪ್ರತಿಯೊಬ್ಬರ ಮನೆಯ ಉಡುಗೆಯಾಯಿತು.ಕ್ರಮೇಣ, ಜೀನ್ಸ್ ವಿನ್ಯಾಸದಲ್ಲಿ ಅನೇಕ ಬದಲಾವಣೆಗಳು ಪ್ರಾರಂಭವಾದವು.
ಆದರೆ 1890 ರಲ್ಲಿ ಸ್ಟ್ರಾಸ್ ಮತ್ತು ಡೇವಿಸ್ ಅವರ ಜೀನ್ಸ್ ಪೇಟೆಂಟ್ ಅವಧಿ ಮುಗಿದಾಗ, ಇತರ ಜೀನ್ಸ್ ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು.
ನಿಮಗೆ ತಿಳಿದಿರುವ ಹಾಗೆ ಜೀನ್ಸ್ ನಲ್ಲಿ ಸಣ್ಣ ಪಾಕೆಟ್ ಇದೆ. ಇದರ ಹಿನ್ನೆಲೆ ಏನು ತಿಳಿಯುವ ಬನ್ನಿ:
ಜೀನ್ಸ್ನ ಸಣ್ಣ ಪಾಕೆಟ್ ಅನ್ನು ಮೊದಲಿಗೆ ‘ವಾಚ್ ಪಾಕೆಟ್’ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಇದನ್ನು ಮೂಲತಃ ಪುರುಷರು ತಮ್ಮ ಕೈಗಡಿಯಾರಗಳನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳಲು ತಯಾರಿಸಲಾಗುತ್ತಿತ್ತು. ಲೆವಿ ಸ್ಟ್ರಾಸ್ ಬ್ಲಾಗ್ ಪ್ರಕಾರ, ಮೂಲತಃ ಒಂದು ಜೋಡಿ ನೀಲಿ ಜೀನ್ಸ್ನಲ್ಲಿ ಕೇವಲ 4 ಪಾಕೆಟ್ಗಳು ಇದ್ದವು,
ಹಿಂಭಾಗದಲ್ಲಿ 1 ಪಾಕೆಟ್, ಮುಂಭಾಗದಲ್ಲಿ 2 ಮತ್ತು 1 ವಾಚ್ ಪಾಕೆಟ್. ಕಾಲಾನಂತರದಲ್ಲಿ ಈ ಪಾಕೆಟ್ ಅನೇಕ ಹೆಸರುಗಳಿಂದ ಕರೆಯಲ್ಪಟ್ಟಿತು. ಉದಾ: ಫ್ರಾಂಟಿಯರ್ ಪಾಕೆಟ್, ಕಾಂಡೋಮ್ ಪಾಕೆಟ್, ಕಾಯಿನ್ ಪಾಕೆಟ್, ಮ್ಯಾಚ್ ಪಾಕೆಟ್ ಮತ್ತು ಟಿಕೆಟ್ ಪಾಕೆಟ್.
ಮೊದಲಿಗೆಲ್ಲ ಜೀನ್ಸ್ ನಲ್ಲಿ ಜೇಬು ಹರಿದಿದೆ ಎಂಬ ದೂರುಗಳು ಹೆಚ್ಚಾದಾಗ, ಸ್ಟ್ರಾಸ್ ಮತ್ತು ಡೇವಿಸ್ , ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಪಾಕೆಟ್ಸ್ ಮತ್ತೆ ಮತ್ತೆ ಸಿಡಿಯುವುದನ್ನು ತಡೆಯಲು ಜೀನ್ಸ್ ನಲ್ಲಿ ತಾಮ್ರದ ರಿವೆಟ್ಗಳನ್ನು ಬಳಸಲು ಪ್ರಾರಂಭಿಸಿದರು.