ಇಲ್ಲಿದೆ ಬಿಸು ಪರ್ಬ- ವಿಷು ಹಬ್ಬದ ಕುರಿತಾದ ಮಾಹಿತಿ
ತುಳುನಾಡಿನಲ್ಲಿ ಬಿಸು ಎಂದು ಕರೆಸಿಕೊಳ್ಳುವ ಹಬ್ಬ ಕೇರಳದಲ್ಲಿ ವಿಷು ಎಂಬ ಹೆಸರಿನಲ್ಲಿ ಕೊಂಡಾಡಲಾಯಿತು.
ವಿಷು ಹೊಸ ವರುಷದ ಆರಂಭ ಸಂವೃದ್ಧಿ ಸಂಕಲ್ಪದ ದಿನ. ಯಾವುದೇ ಕಾರ್ಯದ ಆರಂಭಕ್ಕೆ,ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಈ ದಿನ ಶುಭ ದಿನ.ವರ್ಷವಿಡೀ ಸುಖ,ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಐಶ್ವರ್ಯದ ಸಂಕೇತವಾಗಿ ತುಳುನಾಡ ಜನರು ಮತ್ತು ಕೇರಳಿಯರು ವಿಷು ಹಬ್ಬವನ್ನು ಆಚರಿಸಿದರು. ಇದೇ ಹಬ್ಬ ತುಳು ನಾಡಿನಲ್ಲಿ “ಬಿಸು ಪರ್ಬ’ ಎಂದೇ ಖ್ಯಾತಿ ಪಡೆದಿದೆ.
ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಏಪ್ರಿಲ್ ತಿಂಗಳ ಎರಡನೇ ವಾರದಂದು ಈ ಹಬ್ಬವನ್ನು ಆಚರಿಸುತ್ತಾರೆ. ಬೆಳಕಿನ ಹಬ್ಬವಾಗಿ ಕೇರಳದಲ್ಲಿ ಜನಜನಿತವಾಗಿರುವ ವಿಷು ಹಬ್ಬವನ್ನು ವಿಷು ಕೈನೀಟಮ್‌ನಿಂದ ಆಚರಿಸುತ್ತಾರೆ. ತುಳುನಾಡಿನಲ್ಲಿ ‘ಬಿಸು’ವಾಗಿಯೂ ಕೇರಳದಲ್ಲಿ ‘ವಿಸು’ವಾಗಿಯೂ ಅಚರಿಸಲ್ಪಡುವ ಬಿಸುಹಬ್ಬವೂ ಸುಗ್ಗಿಯನ್ನು ಸಂಕೇತಿಸುತ್ತದೆ.
ಜ್ಯೋತಿಷ್ಯದ ಹೊಸ ವರ್ಷ. ಸೂರ್ಯನು ಮೇಷ ರಾಶಿಗೆ ಪ್ರವೇಶಿಸುವುದನ್ನು ವಿಷ್ಣು ಸೂಚಿಸುವನು. ಇದರ ಬಳಿಕ ಕೃಷಿಕರು ವಿವಿಧ ರೀತಿಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವರು. ಬಿಸು ಹಬ್ಬ ಪ್ರಕೃತಿ ಆರಾಧನೆಯ ಒಂದು ವಿಧಾನವಾಗಿದೆ.ಹೊಸ ವರ್ಷದ ಉನ್ನತಿಯ ಪ್ರಥಮ ಹೆಜ್ಜೆ.
ಮುಂಜಾನೆ ಎದ್ದು ಮನೆಗಳಲ್ಲಿ ಸಿದ್ಧಪಡಿಸಿದ ಕಣಿ ಕಂಡು ಆ ಬಳಿಕ ಹತ್ತಿರದ ದೇವಸ್ಥಾನ, ದೈವಸ್ಥಾನ, ಮಠ, ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸಿ, ದೇವಸ್ಥಾನಗಳಲ್ಲೂ ಕಣಿ ಸಿದ್ಧಪಡಿಸಲಾಗುತ್ತದೆ. ಸೌರಯುಗಾದಿ “ಕಣಿ ಕಾಣುವ ಹಬ್ಬ’ ಇದು. ವರುಷದ ಆರಂಭದಲ್ಲಿ ಮೊದಲ ನೋಟಕ್ಕೆ ಆರಾಧ್ಯ ದೇವರನ್ನು ನೋಡುವ ಕ್ರಮವನ್ನು ಕಣಿ ಕಾಣುವುದು ಎನ್ನಲಾಗುತ್ತದೆ. ಕಣಿ ಎಂದರೆ ಶ್ರೇಯಸ್ಸು, ಶಕುನ, ಭವಿಷ್ಯ ಎಂಬ ಅರ್ಥಗಳೂ ಇವೆ. ಮನೆಯನ್ನು ಸಿಂಗರಿಸಿ ಹಿಂದಿನ ದಿನ ರಾತ್ರಿಯೇ ದೇವರ ವಿಗ್ರಹದ ಜತೆಗೆ ಕಣಿಯ ಸಾಮಗ್ರಿಗಳನ್ನು ಇರಿಸಿ ನವ ಧಾನ್ಯಗಳು, ಬಟ್ಟೆಬರೆ, ಬಂಗಾರದ ಆಭರಣ, ಫಲವಸ್ತುಗಳು ಇತ್ಯಾದಿ ಗಳೊಂದಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಮತ್ತು ಕನ್ನಡಿ ಇರಿಸಿ ಕಣಿಯನ್ನು ಸಿದ್ಧಪಡಿಸಲಾಗುತ್ತದೆ. ಎಲ್ಲರೂ ಬೆಳಗಿನ ಜಾವವೇ ಎದ್ದು, ಮಿಂದು ಹೊಸಬಟ್ಟೆ ಧರಿಸಿ ಗುರುಹಿರಿಯರಿಗೆ ವಂದಿಸಿ ಅನಂತರ ಕಣಿ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.