ಕುಟುಂಬದ ಭೂತ ಕೋಲದಲ್ಲಿ ಹಣದ ವಿಚಾರದಲ್ಲಿ ಗಲಾಟೆ !! | ಮೂವರಿಗೆ ಗುಂಡೇಟು, ಆಸ್ಪತ್ರೆಗೆ ದಾಖಲು
ಕುಟುಂಸ್ಥರೆಲ್ಲಾ ಸೇರಿ ಭೂತ ಕೋಲದಲ್ಲಿ ಭಾಗಿಯಾಗಿದ್ದಾಗ ಹಣದ ವಿಚಾರದಲ್ಲಿ ಗಲಾಟೆ ನಡೆದು ಮೂವರಿಗೆ ಗುಂಡೇಟು ತಗುಲಿರುವ ಘಟನೆ ಕೊಡಗಿನ ಸೋಮವಾರಪೇಟೆ ತಾಲೂಕಿನ ನಗರಳ್ಳಿ ಗ್ರಾಮದಲ್ಲಿ ನಡೆದಿದೆ.
ನಗರಳ್ಳಿ ಗ್ರಾಮದಲ್ಲಿ 12 ವರ್ಷಗಳ ಬಳಿಕ ಗ್ರಾಮದಲ್ಲಿ ಈ ಕುಟುಂಬದ ಕೋಲ ಆಯೋಜಿಸಲಾಗಿತ್ತು. ಕೋಲದ ವೇಳೆ ನಡೆದ ಗಲಾಟೆಯಲ್ಲಿ ಕೆಲವರು ವೀರೇಶ್ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಆಗ ವೀರೇಶ್ ಹಾರಿಸಿದ ಗುಂಡೇಟಿಗೆ ಕುಟುಂಬ ಸದಸ್ಯರಾದ ಮಹೇಶ್, ನಂದೀಶ್, ಚಂದ್ರಶೇಖರ್ ಗಾಯಗೊಂಡಿದ್ದಾರೆ.
ಮಹೇಶ್ ಅವರಿಗೆ ಸೊಂಟದ ಕೆಳಭಾಗಕ್ಕೆ ಗುಂಡೇಟು ತಗುಲಿದ್ದರೆ, ಮತ್ತಿಬ್ಬರ ಕೈಗೆ ಗುಂಡೇಟು ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿಯ ಮೇಲೂ ಹಲ್ಲೆಯ ಗಾಯಗಳಾಗಿವೆ. ಗುಂಡೇಟು ತಗುಲಿದ ಮೂವರನ್ನೂ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಣದ ವಿಚಾರದಲ್ಲಿ ವೀರೇಶ್ ಮತ್ತಿತರ ನಡುವೆ ಗಲಾಟೆ ನಡೆದಿದ್ದು, ವೀರೇಶ್ ಏಕಾಏಕಿ ರಿವಾಲ್ವರ್‌ನಿಂದ ಗುಂಡು ಹಾರಿಸಿದರು ಎಂದು ಗಾಯಾಳು ಚಂದ್ರಶೇಖರ್ ಆರೋಪಿಸಿದ್ದಾರೆ.
ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.