ಕಬ್ಬಿಣದ ರಾಡ್ ನಿಂದ ಪತಿಯನ್ನು ಹೊಡೆದು ಸಾಯಿಸಿದ ಪತ್ನಿ|ನೀಚ ಕೃತ್ಯದ ಹಿಂದಿದೆ ಕಾರಣ!
ಪದೇ ಪದೇ ಜಗಳವಾಡುತ್ತಿದ್ದ ಪತಿಯ ಕಿರಿ-ಕಿರಿ ತಾಳಲಾರದೆ ಆತನ ಪತ್ನಿಯೇ ಕಬ್ಬಿಣದ ರಾಡ್ ನಿಂದ ಹೊಡೆದು ಸಾಯಿಸಿರುವ ಅಮಾನವೀಯ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಂದ್ರಹಳ್ಳಿಯ ಸಾಯಿಬಾಬಾ ಲೇಔಟ್ ನಿವಾಸಿ ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ಫೈನಾನ್ಸಿಯರ್ ಉಮೇಶ್ (52) ಕೊಲೆ ಆದ ವ್ಯಕ್ತಿಯಾಗಿದ್ದು,ಈ ಸಂಬಂಧ ಪತ್ನಿ ವರಲಕ್ಷ್ಮಿ (48) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಸಣ್ಣಪುಟ್ಟ ಫೈನಾನ್ಸ್ ಜೊತೆಗೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಪತ್ನಿ ಕೊಲೆ ಮಾಡಿದ್ದು,ಸೋಮವಾರ ನಸುಕಿನಲ್ಲಿ ನಡೆದಿರುವ ಅವರ ಕೊಲೆ ಬಗ್ಗೆ ತಮ್ಮ ಜೆ.ಎಂ. ಸತೀಶ್ ದೂರು ನೀಡಿದ್ದಾರೆ.ಪ್ರಕರಣದ ಸಂಬಂಧ ಪತ್ನಿ ವರಲಕ್ಷ್ಮಿಯನ್ನು ಬಂಧಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
‘ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಮೃತೂರಿನ ಜಿನ್ನಾಗರ ಗ್ರಾಮದ ಉಮೇಶ್ ಅವರು ಸಂಬಂಧಿಯೂ ಆಗಿದ್ದ ವರಲಕ್ಷ್ಮಿಯನ್ನು 28 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರು.ಆಕೆಯ ಕುಟುಂಬದವರು ಆರ್ಥಿಕವಾಗಿ ಸಹಾಯ ಮಾಡದ ಕಾರಣ ಬೇಸತ್ತು ಆಗಾಗ್ಗೆ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದರು. ತನ್ನ ಹೆಣ್ಣುಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸುತ್ತಿದ್ದರು ಎನ್ನಲಾಗಿದೆ.
ಪ್ರಕಾಶನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬ, ಕೆಲ ತಿಂಗಳ ಹಿಂದಷ್ಟೇ ಅಂದ್ರಹಳ್ಳಿಯ ಸಾಯಿಬಾಬಾ ನಗರದಲ್ಲಿ ನಿರ್ಮಿಸಿದ್ದ ಸ್ವಂತ ಮನೆಗೆ ಸ್ಥಳಾಂತರವಾಗಿತ್ತು. ಮನೆ ನಿರ್ವಹಣೆ ಹಾಗೂ ಇತರೆ ವಿಚಾರಕ್ಕಾಗಿ ದಂಪತಿ ನಡುವೆ ನಿತ್ಯವೂ ಜಗಳವಾಗುತ್ತಿತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ.ಭಾನುವಾರ ತಡರಾತ್ರಿಯೂ ದಂಪತಿ ನಡುವೆ ಜಗಳ ಆಗಿದ್ದು,ಉಮೇಶ್ ಅವರು ವರಲಕ್ಷ್ಮಿಗೆ ಒದ್ದಿದ್ದರು. ಮಕ್ಕಳು ಜಗಳ ಬಿಡಿಸಿದ್ದರಿಂದ ದಂಪತಿ ಪ್ರತ್ಯೇಕ ಕೊಠಡಿಯಲ್ಲಿ ಮಲಗಿಕೊಂಡಿದ್ದರು.
ಸೋಮವಾರ ನಸುಕಿನಲ್ಲಿ ಎಚ್ಚರಗೊಂಡಿದ್ದ ವರಲಕ್ಷ್ಮಿ, ಕಬ್ಬಿಣದ ರಾಡ್‌ನಿಂದ ಉಮೇಶ್ ತಲೆಗೆ ಹೊಡೆದಿದ್ದಳು. ತಲೆಗೆ ತೀವ್ರ ಗಾಯವಾಗಿ ರಕ್ತ ಸೋರುತ್ತಿತ್ತು. ಮಕ್ಕಳು ಎಚ್ಚರವಾಗುತ್ತಿದ್ದಂತೆ ಉಮೇಶ್ ಅವರನ್ನು ಸುಂಕದಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಳು. ತಪಾಸಣೆ ನಡೆಸಿದ್ದ ವೈದ್ಯರು, ಉಮೇಶ್ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ವಿಷಯ ತಿಳಿದು ಬ್ಯಾಡರಹಳ್ಳಿ ಠಾಣೆ ಪೊಲೀಸರು ಆಸತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಸದ್ಯ ಪತ್ನಿಯನ್ನು ಕೊಲೆ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಪೊಲೀಸ್ ಸಿಬ್ಬಂದಿ ವಿವಿಧ ಆಯಾಮಗಳಲ್ಲಿ ಹೆಚ್ಚಿನ ತನಿಖೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಸಂಜೀವ್ ಪಾಟೀಲ್ ಹೇಳಿದ್ದಾರೆ.’ಅಪರಿಚಿತರು ಕೊಲೆ ಮಾಡಿರುವ ಮಾಹಿತಿ ಇತ್ತು. ತನಿಖೆ ಕೈಗೊಂಡಾಗ ವರಲಕ್ಷ್ಮಿಯೇ ಆರೋಪಿ ಎಂಬುದು ತಿಳಿಯಿತು. ‘ನಿತ್ಯವೂ ಜಗಳ ಮಾಡುತ್ತಿದ್ದ ಪತಿ, ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ. ಹೊಡೆಯುತ್ತಿದ್ದ. ಆತನ ವರ್ತನೆ ತಡೆಯಲಾರದೇ ಕೊಲೆ ಮಾಡಿದೆ’ ಎಂಬುದಾಗಿ ವರಲಕ್ಷ್ಮಿ ಹೇಳಿಕೆ ನೀಡಿದ್ದಾಳೆ’ ಎಂದೂ ಪೊಲೀಸರು ಹೇಳಿದರು.