ರಸ್ತೆಗೆ ಬಂದು ನಿಂತ ಧರ್ಮ ಸಂಘರ್ಷ !! | ಮುಸ್ಲಿಂ ಹೆಸರಿರುವ ರಸ್ತೆ, ಸರ್ಕಲ್ ಗಳಿಗೆ ಶೀಘ್ರದಲ್ಲೇ ಹಿಂದೂ ಮರುನಾಮಕರಣ ಸಾಧ್ಯತೆ
ರಾಜ್ಯದಲ್ಲಿ ಧರ್ಮ ಸಂಘರ್ಷ ಮುಂದುವರೆಯುತ್ತಲೇ ಇದೆ. ಹಿಜಾಬ್ ಧರಿಸುವ ವಿಚಾರದಲ್ಲಿ ಆರಂಭವಾದ ವಿವಾದ ಹಲಾಲ್ ಮಾಂಸ ನಿಷೇಧ, ಮುಸ್ಲಿಂ ವರ್ತಕರಿಗೆ ಹಿಂದೂ ಧಾರ್ಮಿಕ ಉತ್ಸವ, ಜಾತ್ರೆ, ದೇವಸ್ಥಾನಗಳಲ್ಲಿ ನಿರ್ಬಂಧ, ಮುಸ್ಲಿಂ ವಾಹನಗಳಿಗೆ ಹಿಂದೂಗಳು ಹತ್ತಲು ನಿರ್ಬಂಧದಿಂದ ಇದೀಗ ಬೆಂಗಳೂರಿನಲ್ಲಿ ಮುಸ್ಲಿಂ ಹೆಸರಿನಲ್ಲಿರುವ ರಸ್ತೆಗಳಿಗೆ ಹಿಂದೂಗಳು ಮರುನಾಮಕರಣಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ದಟ್ಟವಾಗಿದೆ.
ರಾಜಧಾನಿ ಬೆಂಗಳೂರಿನ ರಸ್ತೆ, ಪ್ರದೇಶಗಳು, ಪಾರ್ಕ್ ಗಳಲ್ಲಿ ಇರುವ ಮುಸ್ಲಿಂ ಹೆಸರುಗಳನ್ನು ಬದಲಾಯಿಸಲು ಸಿದ್ಧತೆ ನಡೆಯುತ್ತಿದ್ದು, ಹಿಂದೂಗಳ ಹೆಸರನ್ನು ಮರುನಾಮಕರಣಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಬಿಜೆಪಿ ಶಾಸಕರು ಮತ್ತು ಜನಪ್ರತಿನಿಧಿಗಳು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಿಬಿಎಂಪಿ ಅಧಿಕಾರಿಗಳಿಗೆ ಆಂತರಿಕವಾಗಿ ಮಾಹಿತಿ ರವಾನಿಸಲಾಗಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ಅಧಿಕೃತ ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ.
ಮೇಕ್ರಿ ಸರ್ಕಲ್ ನ ಟಿಪ್ಪು ಸುಲ್ತಾನ್ ಪ್ಯಾಲೆಸ್ ರೋಡ್, ಇನಾಯುತೂಲ್ಲಾ ಮೇಕ್ರಿ, ಅಂಜನಾಪುರ ಮುಖ್ಯ ರಸ್ತೆಯಲ್ಲಿರುವ ಟಿಪ್ಪು ಸರ್ಕಲ್, ವಿದ್ಯಾರಣ್ಯಪುರದ ಮೊಹಮ್ಮದ್ ಸಾಬ್ ಪಾಳ್ಯ, ಜಾಮಿಯಾ ಮಸೀದಿ ರಸ್ತೆ, ಮುಬಾರಕ್ ರಸ್ತೆ, ಶಾಂತಿನಗರದ ಬಿಲಾಲ್ ನಗರ, ಆರ್ ಟಿ ನಗರದ ಸುಲ್ತಾನ್ ಪಾಳ್ಯ, ಬನಶಂಕರಿಯ ಯಾಬರ್ ನಗರ, ಗುರಪ್ಪನ ಪಾಳ್ಯದ ಬಿಸ್ಮಿಲ್ಲಾ ನಗರ, ಇಲಿಯಾಸ್ ನಗರ, ಮೈಸೂರು ರಸ್ತೆಯ ಟಿಪ್ಪು ನಗರ ಹೀಗೆ ಮುಸ್ಲಿಂ ಹೆಸರಿರುವ ಸರ್ಕಲ್, ರಸ್ತೆಗಳಿಗೆ ಮರು ನಾಮಕರಣ ಮಾಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.