ಇಂದು ಡಾಕ್ಟರ್ ರಾಜಕುಮಾರ್ ಸ್ಮರಣೆಯ ದಿನ; ಕುಟುಂಬಸ್ಥರು ಆಚರಿಸಿದ್ದು ಹೀಗೆ
ಇಂದು ಮಂಗಳವಾರ(ಏಪ್ರಿಲ್ 12) ಕನ್ನಡದ ವರನಟ, ನಟ ಸಾರ್ವಭೌಮ, ಅಭಿಮಾನಿಗಳ ಪ್ರೀತಿಯ ಅಣ್ಣಾವ್ರು ಡಾ ರಾಜ್ ಕುಮಾರ್ ಅವರ ಪುಣ್ಯತಿಥಿ. ಅವರ ನೆನಪಿನ ದಿನ. ಅವರು ಅಗಲಿ ಇಂದಿಗೆ 16 ವರ್ಷಗಳಾಗಿವೆ.
ಇಂದು ಬೆಳಗ್ಗೆ ಡಾ ರಾಜ್ ಕುಮಾರ್ ಕುಟುಂಬಸ್ಥರು ಕಂಠೀವರ ಸ್ಟುಡಿಯೊ ಬಳಿ ಆಗಮಿಸಿ ಡಾ ರಾಜ್ ಸಮಾಧಿಗೆ ಪೂಜೆ, ನಮನ ಸಲ್ಲಿಸಿದರು.ರಾಜ್ ಕುಮಾರ್ ಗೆ ಇಷ್ಟವಾದ ಮುದ್ದೆ, ಚಿಕನ್ ಬಿರಿಯಾನಿ, ಹಲವು ಸಿಹಿ ತಿಂಡಿ ತಿನಿಸುಗಳನ್ನು ಇಡುವ ಮೂಲಕ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್-ದಂಪತಿ, ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಹೆಣ್ಣು ಮಕ್ಕಳಾದ ಲಕ್ಷ್ಮೀ ಹಾಗು ಪೂರ್ಣಿಮಾ ಸೇರಿದಂತೆ ಇಡೀ ಕುಟುಂಬ ವರನಟನ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಪಾರ್ವತಮ್ಮ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಸಮಾಧಿಗೂ ಕುಟುಂಬಸ್ಥರು ಪೂಜೆ ಸಲ್ಲಿಸಿದರು.
ಮಾತನಾಡಿದ ನಟ ಶಿವರಾಜ್ ಕುಮಾರ್, ನಮ್ಮ ಹೆಸರಿನ ಜೊತೆ ಅವರ ಹೆಸರು ಇರುವುದರಿಂದ ನಾವು ಅವರೊಳಗೆ ಒಂದಾಗಿದ್ದೇವೆ.ತಂದೆಯ ಬಗ್ಗೆ ಮಾತನಾಡದ ದಿನಗಳಿಲ್ಲ. ಅಮ್ಮ-ಪುನೀತ್ ಕೂಡ ಈಗ ಇಲ್ಲದೆ ನೋವು ಹೆಚ್ಚಾಗಿದೆ. ನೋವಿನ ಮಧ್ಯೆ ಜೀವನ ಮುಂದುವರಿಯಬೇಕು. ಅವರನ್ನು ಜೀವಂತವಾಗಿಡಲು ಅಭಿಮಾನಿಗಳು, ಗಣ್ಯರು, ಚಿತ್ರರಂಗದವರು ಸಹಾಯ ಮಾಡುತ್ತಿದ್ದಾರೆ ಎಂದರು.
ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇವತ್ತಿಗೂ ಭಾರತೀಯ ಸಿನಿಮಾ ರಂಗದಲ್ಲಿ ಮೇರು ನಟರಾಗಿದ್ದ ಡಾ.ರಾಜ್ಕುಮಾರ್ ಎಂದಿಗೂ ಅಜರಾಮರ.