ಭಾರೀ ಅಗ್ನಿ ಅವಘಡ : ಗೋಶಾಲೆಗೆ ತಾಗಿದ ಬೆಂಕಿ!

ಕೊಳೆಗೇರಿ ಪ್ರದೇಶದಲ್ಲೊಂದು ನಿನ್ನೆ ಮಧ್ಯಾಹ್ನ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಇದರಿಂದಾಗಿ ಸಮೀಪದ ದನದ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡಿದ್ದರಿಂದ 50 ಹಸು ಹಾಗೂ ಕರುಗಳು ಬೆಂಕಿಗೆ ಆಹುತಿಯಾಗಿವೆ. ಈ ಘಟನೆ
ಘಜಿಯಾಬಾದ್‌ನ ಇಂದಿರಾಪುರಂ ಪ್ರದೇಶದಲ್ಲಿ ನಡೆದಿದೆ.

 

ವರದಿಗಳ ಪ್ರಕಾರ, ಬೆಂಕಿ ಹೊತ್ತಿಕೊಂಡ ಸ್ಥಳದ ಸಮೀಪದಲ್ಲಿಯೇ ಇಂಡಿಯನ್ ಆಯಿಲ್ ಗೋಡೌನ್ ಇದ್ದು, ಹೀಗಾಗಿ, ಕೆಲವು ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಿದ್ದು, ಆ ಶಬ್ದಕ್ಕೆ ಸ್ಥಳೀಯರು ಓಡಿಬಂದು ನೋಡಿದಾಗ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡಿರುವ ವಿಷಯ ಗೊತ್ತಾಗಿದೆ.

ವಿಷಯ ತಿಳಿದ ಕೂಡಲೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಸ್ಥಳದಲ್ಲಿ ಪಶುವೈದ್ಯರನ್ನೂ ನಿಯೋಜಿಸಲಾಗಿತ್ತು. 50ಕ್ಕೂ ಹೆಚ್ಚು ದನಗಳು ಸಜೀವ ದಹನವಾಗಿವೆ. ಬೆಂಕಿ ಹತ್ತಿಕೊಳ್ಳಲು ನಿಖರವಾದ ಕಾರಣ ಇನ್ನೂ ಕಂಡುಹಿಡಿಯಲಾಗಿಲ್ಲ.

ಶ್ರೀ ಕೃಷ್ಣ ಗೋಶಾಲಾ ಟ್ರಸ್ಟ್‌ನ ಅಧ್ಯಕ್ಷ ಸೂರಜ್ ಪಂಡಿತ್ ಎಂಬ ವ್ಯಕ್ತಿಯೊಬ್ಬರು 100ಕ್ಕೂ ಹೆಚ್ಚು ಹಸುಗಳು ವಾಸಿಸುವ ಗೋಶಾಲೆಯನ್ನು ನಡೆಸುತ್ತಿದ್ದರು. ಅವರ ಈ ಗೋಶಾಲೆಗೆ ಬೆಂಕಿ ಹೊತ್ತಿಕೊಂಡಿದೆ.

ಸ್ಲಂಗಳಲ್ಲಿ ಭೀಕರ ಬೆಂಕಿಯಿಂದಾಗಿ, ಕಾಲ್ತುಳಿತ ಕೂಡ ಸಂಭವಿಸಿದೆ. ಅಷ್ಟೇ ಅಲ್ಲ, ಪಕ್ಕದ ಗೋಡೌನ್ ಮತ್ತು ಮನೆಗಳಲ್ಲಿ ಇಟ್ಟಿದ್ದ ಸಣ್ಣ ಸಿಲಿಂಡರ್‌ಗಳಿಗೂ ಬೆಂಕಿ ತಗುಲಿ ಸ್ಫೋಟಗೊಂಡಿವೆ. ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಹೆಚ್ಚು ಭೀಕರ ಸ್ವರೂಪ ಪಡೆದುಕೊಂಡಿದೆ. ಗೋಶಾಲೆಯಲ್ಲಿ ನೂರಾರು ಹಸುಗಳು ಇದ್ದವು. ಆ ಎಲ್ಲ ಹಸುಗಳು ಸ್ಥಳದಲ್ಲೇ ಸುಟ್ಟು ಕರಕಲಾಗಿವೆ. ಹಲವಾರು ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಂತ್ರಸ್ತರಿಗೆ 24 ಗಂಟೆಗಳಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಸೂಚನೆಗಳನ್ನು ನೀಡಿದ್ದಾರೆ. ಇದರೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿ ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವಂತೆ ಸಿಎಂ ಯೋಗಿ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.

Leave A Reply

Your email address will not be published.