ಕೊರೊನಾ ಸೋಂಕಿನಿಂದ ಪುರುಷತ್ವಕ್ಕೆ ಕುತ್ತು : ಸಂಶೋಧನೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ !
ಕೊರೊನಾ ಸೋಂಕು ಹಲವಾರು ಗಂಭೀರ ಲಕ್ಷಣಗಳಿಂದ ಕೂಡಿದ್ದೇ ಆಗಿದ್ದರೇ, ಪ್ರಾಣಕ್ಕೇ ಅಪಾಯ ಅನ್ನೋದು ಎಲ್ಲರಿಗೂ ತಿಳಿದಿದೆ. ಹಾಗಂತ ಅಷ್ಟೇನೋ ಗಂಭೀರವಲ್ಲದ ಅಥವಾ ಮಧ್ಯಮ ಪ್ರಮಾಣದ ಕೋವಿಡ್ ಲಕ್ಷಣಗಳಿದ್ದರೆ ಕಡೆಗಣಿಸಬೇಡಿ. ಅಪಾಯಕಾರಿ ಲಕ್ಷಣಗಳಿಲ್ಲದೇ ಇದ್ದರೂ ಅಂತಹ ಕೋವಿಡ್ ಸೋಂಕು, ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯವನ್ನೇ ಕಸಿದುಕೊಳ್ಳಬಹುದು.
ಇಂಥದ್ದೊಂದು ಭಯ ಹುಟ್ಟಿಸೋ ಸಂಗತಿಯೊಂದು ಈಗ ಸಂಶೋಧನೆಯಿಂದ ಬಯಲಾಗಿದೆ.
ಕೊರೊನಾ ಸೋಂಕಿನಿಂದಾಗಿ ಪುರುಷ ಸಂತಾನೋತ್ಪತ್ತಿ ಕ್ರಿಯೆಗೆ ಸಂಬಂಧಿಸಿದ ಪ್ರೊಟೀನ್‌ಗಳ ಮಟ್ಟ ಕಡಿಮೆಯಾಗುವ ಅಪಾಯ ಹೆಚ್ಚಿದೆಯಂತೆ. ಇದು ಪುರಷತ್ವದ ಫಲವತ್ತತೆಯನ್ನು ಕುಂಠಿತಗೊಳಿಸಬಹುದು ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯ ಸಂಶೋಧಕರ ತಂಡ ಬಹಿರಂಗಗೊಳಿಸಿದೆ.
ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಪುರುಷರ ವೀರ್ಯಾಣುಗಳನ್ನು ಪರೀಕ್ಷೆಗೆ ಒಳಪಡಿಸಿದ ಸಂಶೋಧಕರು ಈ ತೀರ್ಮಾನಕ್ಕೆ ಬಂದಿದ್ದಾರೆ.
ಕೊರೊನಾ ಸೋಂಕಿಗೆ ಕಾರಣವಾಗುವ SARS-CoV-2, ಮುಖ್ಯವಾಗಿ ಉಸಿರಾಟದ ವ್ಯವಸ್ಥೆ ಮತ್ತು ದೇಹದ ಪ್ರತಿಕ್ರಿಯೆಯ ಮೇಲೆ ಪರಿಣಾಮ ಬೀರುವುದರಿಂದ, ಸಂಶೋಧಕರ ಪ್ರಕಾರ ಇತರ ಅಂಗಾಂಶಗಳನ್ನು ಸಹ ಹಾನಿಗೊಳಿಸುತ್ತದೆ. ಇತ್ತೀಚಿಗೆ ದೊರೆತಿರುವ ಪುರಾವೆಗಳು, COVID-19 ಸೋಂಕು ಪುರುಷ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ ಎಂಬುದನ್ನು ದೃಢಪಡಿಸಿದೆ.
ಆರೋಗ್ಯವಂತ ಪುರುಷರ ವೀರ್ಯದಲ್ಲಿನ ಪ್ರೋಟೀನ್‌ಗಳ ಮಟ್ಟ ಹಾಗೂ ಕೋವಿಡ್ ಸೋಂಕಿಗೆ ತುತ್ತಾಗಿರುವ ಪುರುಷರ ವೀರ್ಯದ ಮಟ್ಟವನ್ನು ಹೋಲಿಕೆ ಮಾಡಲಾಗಿದೆ. 10 ಆರೋಗ್ಯವಂತ ಪುರುಷರು ಮತ್ತು ಇತ್ತೀಚೆಗೆ COVID-19 ನಿಂದ ಚೇತರಿಸಿಕೊಂಡ 17 ಪುರುಷರ ವೀರ್ಯ ಮಾದರಿಗಳನ್ನು ವಿಶ್ಲೇಷಿಸಲಾಗಿದೆ.
ಕೊರೊನಾದಿಂದ ಗುಣಮುಖರಾದ ಪುರುಷರಲ್ಲಿ ಸ್ಪರ್ಮ್ ಕೌಂಟ್ ಮತ್ತು ಚಲನಶೀಲತೆ ಗಮನಾರ್ಹವಾಗಿ ಕಡಿಮೆಯಾಗಿರುವುದು ಸಂಶೋಧನೆಯಲ್ಲಿ ಪತ್ತೆಯಾಗಿದೆಯಂತೆ.
ಫಲವತ್ತತೆಗೆ ಸಂಬಂಧಿಸಿದ ಎರಡು ಪ್ರೋಟೀನ್‌ಗಳು, ಸೆಮೆನೊಜೆಲಿನ್ 1 ಮತ್ತು ಪ್ರೊಸಾಪೊಸಿನ್, ನಿಯಂತ್ರಣಗಳ ವೀರ್ಯಕ್ಕಿಂತ COVID-19ನಿಂದ ಚೇತರಿಸಿಕೊಂಡ ಗುಂಪಿನವರಲ್ಲಿ ಅರ್ಧಕ್ಕಿಂತ ಕಡಿಮೆ ಮಟ್ಟದಲ್ಲಿವೆ.