ನಟಿ ಮೇಲಿನ ಹಲ್ಲೆ ಪ್ರಕರಣ : ಮಾಜಿ ಪತಿ, ನಟ ದಿಲೀಪ್ ಫೋನ್ ಸಂಭಾಷಣೆಯ ಧ್ವನಿ ಮಾದರಿಯನ್ನು ಗುರತಿಸಿದ ಮಂಜು ವಾರಿಯರ್!!!

2017 ರಲ್ಲಿ ಸಿನಿಮಾ ನಟಿಯೊಬ್ಬಳ ಮೇಲೆ ನಡೆದ ಹಲ್ಲೆ ಪ್ರಕರಣದ ತನಿಖೆಯ ಭಾಗವಾಗಿ ಮಲಯಾಳಂ ಚಿತ್ರ ನಟಿ ಮಂಜುವಾರಿಯರ್ ಅವರು ವಿವಾದಾತ್ಮಕ ದೂರವಾಣಿ ಸಂಭಾಷಣೆಗಳಲ್ಲಿರುವ ತನ್ನ ಮಾಜಿ ಪತಿ, ಚಿತ್ರ ನಟ ದಿಲೀಪ್ ಹಾಗೂ ಆತನ ಸಹೋದರ ಅನೂಪ್ ಮತ್ತು ಭಾವ ಸೂರಜ್ ಧ್ವನಿಯ ಮಾದರಿಗಳನ್ನು ಗುರುತಿಸಿದ್ದಾರೆ.

ಚಿತ್ರನಟಿಯ ಮೇಲಿನ ಹಲ್ಲೆ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ ಕೇರಳ ಕ್ರೈಂ ಬ್ರಾಂಚ್ ಮಂಜುವಾರಿಯರ್ ಅವರಿಂದ ಕೊಚ್ಚಿಯ ಹೊಟೇಲೊಂದರಲ್ಲಿ ಸುಮಾರು ನಾಲ್ಕು ಗಂಟೆಗಳವರೆಗೂ ವಿಚಾರಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಂಜುವಾರಿಯರ್ ಅವರು ಗುರುತಿಸಿದ ದೂರವಾಣಿ ಸಂಭಾಷಣೆಯ ಧ್ವನಿಮುದ್ರಿಕೆಗಳಲ್ಲಿ ಸಿನೆಮಾ ನಿರ್ದೇಶಕ ಬಾಲಚಂದ್ರ ಕುಮಾರ್ ಅವರ ಸಂಭಾಷಣೆಯೂ ಒಳಗೊಂಡಿತ್ತು. ಚಿತ್ರ ನಟಿ ಮೇಲಿನ ಹಲ್ಲೆ ಪ್ರಕರಣದ ತನಿಖಾಧಿಕಾರಿಗಳ ಜೀವಕ್ಕೆ ಅಪಾಯವೊಡ್ಡಲು ನಟ ದಿಲೀಪ್ ಅವರು ತನ್ನ ನಿಕಟ ಬಂಧುಗಳು ಹಾಗೂ ಸ್ನೇಹಿತರೊಂದಿಗೆ ಸಂಚು ರೂಪಿಸಿದ್ದನೆಂದು ಬಾಲಚಂದ್ರ ಕುಮಾರ್ ಆರೋಪಿಸಿದ್ದರು.

ಮಂಜು ವಾರಿಯರ್ ನಟ ದಿಲೀಪ್ ಅವರ ಮಾಜಿ ಪತ್ನಿ. ಚಲನಚಿತ್ರ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಮಂಜು ವಾರಿಯರ್ ಅವರನ್ನು ಸಾಕ್ಷಿಯಾಗಿ ಪರಿಗಣಿಸಲಾಗಿದೆ.

ದಿಲೀಪ್ ಅವರ ಈಗಿನ ಪತ್ನಿ ಹಾಗೂ ನಟಿ ಕಾವ್ಯ ಮಾಧವನ್ ಅವರನ್ನು ಕೂಡಾ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸೋಮವಾರ ವಿಚಾರಣೆ ನಡೆಸಲಿದ್ದಾರೆ. 2017ರ ಫೆಬ್ರವರಿ 17ರಂದು ನಡೆದ ಚಲನಚಿತ್ರ ನಟಿ ಮೇಲಿನ ಹಲ್ಲೆ ಪ್ರಕರಣದಲ್ಲಿ 10 ಮಂದಿ ಆರೋಪಿಗಳಾಗಿದ್ದು, ಅವರಲ್ಲಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಅವರನ್ನು ಪೊಲೀಸರು ಬಂಧಿಸಿದ್ದರಾದರೂ, ಆನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು.

Leave A Reply

Your email address will not be published.