ಕೆ.ಎಫ್. ಡಿ.ಸಿ.ನೌಕರರ ಹಿತ ಕಾಪಾಡಿದ ಸಂಸದ ನಳಿನ್ ಕುಮಾರ್ ಕಟೀಲ್ | ಏಕಾಏಕಿ ಕೆಲಸದಿಂದ ಕೈಬಿಟ್ಟ ನೌಕರರನ್ನು ಮರು ಸೇರ್ಪಡೆಗೆ ಸೂಚನೆ
ಸವಣೂರು : ಸುಳ್ಯ ತಾಲೂಕು ಮತ್ತು ಪುತ್ತೂರು ತಾಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಅರಣ್ಯ ಅಭಿವೃದ್ಧಿ ನಿಗಮ (ಕೆ.ಎಫ್. ಡಿ.ಸಿ.) ಯಲ್ಲಿ ಹತ್ತಾರು ವರ್ಷ ಗಳಿಂದ ತಾತ್ಕಾಲಿಕ ನೆಲೆಯಲ್ಲಿ ಕೆಲಸ ನಿರ್ವಹಿಸಿದ್ದ ಕಚೇರಿ ಸಿಬ್ಬಂದಿ ಹಾಗೂ ಕ್ಷೇತ್ರ ಸಿಬ್ಬಂದಿಗಳಲ್ಲಿ ಶೇಕಡಾ ಅರುವತ್ತು ಮಂದಿಯನ್ನು ಪೂರ್ವ ಸೂಚನೆ ನೀಡದೆ ಏಕಾಏಕಿ ಕೆಲಸದಿಂದ ಕೈ ಬಿಟ್ಟಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೂಡಲೇ ನೌಕರರನ್ನು ಮರು ಸೇರ್ಪಡೆಗೊಳಿಸಲು ಸೂಚನೆ ನೀಡಿದ್ದಾರೆ.
ನಿಗಮದಲ್ಲಿ 1200 ಕಾರ್ಮಿಕರ ಮತ್ತು 360 ಕ್ಷೇತ್ರ ಹಾಗೂ ಕಚೇರಿ ಸಿಬ್ಬಂದಿಗಳು ದುಡಿಯುತ್ತಿದ್ದಾರೆ. ಇದೀಗ ಈ 360 ಮಂದಿ ಸಿಬ್ಬಂದಿಗಳಲ್ಲಿ ಶೇ. 60 ಮಂದಿ ಸಿಬ್ಬಂದಿಗಳನ್ನು ಏಕಾಏಕಿ ಕೆಲಸ ದಿಂದ ಕೈಬಿಡಲಾಗಿದೆ.
ತೋಟದ ಮೇಸ್ತ್ರಿಗಳನ್ನು ಹಿಂಬಡ್ತಿ ನೀಡಿ ಮೂರ್ತೆ ಕೆಲಸಕ್ಕೆ ನಿಯೋಜಿಸ ಲಾಗಿದೆ.ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ, ಬಿಪಿಎಲ್ ಕಾರ್ಡ್ ಇಲ್ಲದ, ಬೇರೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ವಯೋಮಿತಿ ಮೀರಿದ, ಹದಿನೈದು ವರ್ಷಕ್ಕೂ ಹೆಚ್ಚು ಕಾಲ ಕನಿಷ್ಠ ಸಂಬಳದಲ್ಲಿ ದುಡಿದ 150 ಕ್ಕೂ ಅಧಿಕ ಕುಟುಂಬಗಳು ಸಂಕಷ್ಟಕ್ಕೆ ಗುರಿಯಾಗಿದ್ದವು.
ಈ ಸಮಸ್ಯೆ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ ಭೇಟಿ ಮಾಡಿದ ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡರು.ಕೂಡಲೇ ಸ್ಪಂದಿಸಿದ ಅವರು ನಿಗಮದ ಅಧ್ಯಕ್ಷೆ ತಾರಾ ಅವರನ್ನು ಸಂಪರ್ಕಿಸಿ ಕೂಡಲೇ ಕೈ ಬಿಟ್ಟಿರುವ ಕಾರ್ಮಿಕರನ್ನು ಮರು ಸೇರ್ಪಡೆಗೊಳಿಸಲು ಸೂಚನೆ ನೀಡಿದರು.
ಕೈ ಬಿಟ್ಟಿರುವ ಕಾರ್ಮಿಕರನ್ನು ಮರು ಸೇರ್ಪಡೆಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಾರಾ ಅವರು ನಳಿನ್ ಕುಮಾರ್ ಅವರಿಗೆ ತಿಳಿಸಿದರು.