ಮಗು ಬೇಕೆಂದು ಬಯಸಿದ ಮಹಿಳೆಗೆ 15 ದಿನದ ಪೆರೋಲ್ ಕೊಟ್ಟು ಗಂಡನನ್ನು ಕಳುಹಿಸಿದ ಕೋರ್ಟ್!
ಮದುವೆಯಾದಮೇಲೆ ಮಗು ಆಗಬೇಕೆಂಬ ಸಹಜ ಆಸೆ ಗಂಡ ಹೆಂಡತಿಯರಲ್ಲಿ ಇರುತ್ತೆ. ಆದರೆ ಇಲ್ಲೊಬ್ಬ ಮಹಿಳೆ ತನಗೆ ಮಗು ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾಳೆ. ಇದೊಂದು ವಿಚಿತ್ರ ಪ್ರಕರಣ. ಈ ಪ್ರಕರಣದ ಬಗ್ಗೆ ಕೋರ್ಟ್ ಏನು ಹೇಳಿದೆ? ಈಕೆಯ ಗಂಡ ಎಲ್ಲಿದ್ದಾನೆ? ಇದೆಲ್ಲಾ ಮಾಹಿತಿ ಇಲ್ಲಿದೆ.
ಈ ಘಟನೆ ನಡೆದಿರೋದು ರಾಜಸ್ಥಾನದಲ್ಲಿ. ಮಹಿಳೆಯ ಗಂಡ ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿ. ಆ ವ್ಯಕ್ತಿಗೆ ಪೆರೋಲ್ ನೀಡಿ, ಮಗು ಬೇಕೆಂದು ಕೋರಿದ್ದ ಹೆಂಡತಿಗೆ ಸಂಬಂಧಿಸಿದಂತೆ ಇರುವ ಈ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆದರೆ ವಿಶೇಷ ಏನೆಂದರೆ ಮಗು ಬೇಕೆಂದು ಕೋರಿ ಪತ್ನಿ ಸಲ್ಲಿಸಿದ್ದ ಮನವಿಯನ್ನು ಆಧರಿಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಗೆ ರಾಜಸ್ಥಾನ ಹೈಕೋರ್ಟ್ ಪೆರೋಲ್ ನೀಡಿದೆ.
ಘಟನೆ ಏನು ?
ಜೈಲುಪಾಲಾಗಿದ್ದ ಪತಿಯಿಂದ ಮಗು ಪಡೆಯಬೇಂದು ಬಯಸಿದ ಮಹಿಳೆ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಪೆರೋಲ್‌ಗಾಗಿ ಕೋರಿದ್ದಳು. ಆದರೆ ಜಿಲ್ಲಾಧಿಕಾರಿ ತನ್ನ ಮನವಿಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಪತ್ನಿಯ ವಾದವನ್ನು ಆಲಿಸಿದ ನ್ಯಾಯಾಲಯ ಮಾನವೀಯ ನೆಲೆಯಲ್ಲಿ ಪತಿಗೆ 15 ದಿನಗಳ ಕಾಲ ಪೆರೋಲ್ ಮೇಲೆ ತೆರಳುವಂತೆ ಆದೇಶ ನೀಡಿದೆ. ಇನ್ನು, ಸುಮಾರು ಹನ್ನೊಂದು ತಿಂಗಳ ಹಿಂದೆ ನಂದಲಾಲ್ 20 ದಿನಗಳ ಪೆರೋಲ್ ಪಡೆದಿದ್ದ.
ಶಿಕ್ಷೆ ಪಡೆದು ಜೈಲು ಸೇರುವ ಕೆಲ ಸಮಯದ ಹಿಂದಷ್ಟೇ ನಂದಲಾಲ್ ವಿವಾಹವಾಗಿದ್ದ. ಫೆಬ್ರವರಿ 6, 2019 ರಿಂದ ಅಜೀರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಕಳೆದ ವರ್ಷ ಮೇ ತಿಂಗಳಲ್ಲಿ ಮೊದಲ ಬಾರಿ ಪೆರೋಲ್ ನೀಡಲಾಗಿತ್ತು. ಏತನ್ಮಧ್ಯೆ, ಕೊರೋನಾ ವೈರಸ್ ಮತ್ತು ಇತರ ಕಾರಣಗಳಿಂದ, ನಂದಲಾಲ್ ಅವರ ಪತ್ನಿ ಮತ್ತು ಕುಟುಂಬದೊಂದಿಗೆ ಸುಮಾರು ಎರಡು ವರ್ಷಗಳವರೆಗೆ ಭೇಟಿಯಾಗಲು ಸಾಧ್ಯವಾಗಲಿಲ್ಲ.
ಹೀಗಿರುವಾಗ ಪತ್ನಿ ತನ್ನ ಅರ್ಜಿಯೊಂದಿಗೆ ಜೈಲು ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದ್ದಾಳೆ. ಕೆಲ ದಿನಗಳ ಹಿಂದೆ ವಕೀಲರ ಜತೆ ಜೈಲು ಅಧಿಕಾರಿಗಳನ್ನು ಸಂಪರ್ಕಿಸಿ ತಾನು ತಾಯಿಯಾಗಲು ಬಯಸುವುದಾಗಿ ಹೇಳಿದ್ದಳು. ತನ್ನ ಹಕ್ಕನ್ನು ಈಡೇರಿಸಲು ತನ್ನ ಪತಿಯನ್ನು ಕೆಲವು ದಿನಗಳ ಕಾಲ ಪೆರೋಲ್ ಮೇಲೆ ಬಿಡುವಂತೆ ಒತ್ತಾಯಿಸಿದಳು. ಕಾರಾಗೃಹದ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇರುವುದರಿಂದ ಜಿಲ್ಲಾಧಿಕಾರಿ ಬಳಿ ತೆರಳಿ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಕೂಡ ಇದನ್ನು ಗಂಭೀರವಾಗಿ ಪರಿಗಣಿಸದೆ ಇದ್ದುದರಿಂದ ನ್ಯಾಯಾಲಯದ ಮೊರೆ ಹೋಗಿದ್ದಳು. ಈಗ ನ್ಯಾಯಾಲಯ ಪೆರೋಲ್ ನೀಡಿದೆ.