ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಅಭಿವೃದ್ಧಿ ಕಾರ್ಯ ಸಹಿಸದೆ ಅಪಪ್ರಚಾರ | ಕೈಲಾಗದವರು ಮೈ ಪರಚಿಕೊಂಡರು !

ಕಡಬ : ಅನ್ಯ ಕೋಮಿನ ಯುವಕನೊಂದಿಗಿದ್ದ ಹಿಂದೂ ಹುಡುಗಿಯ ಪ್ರಕರಣದಲ್ಲಿ ಅಮಾಯಕ ಹಿಂದೂ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ ವಿಚಾರದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ವಿರುದ್ಧ ಮಾಡಿರುವ ಆರೋಪ ವ್ಯವಸ್ಥಿತ ಷಡ್ಯಂತರವಾಗಿದ್ದು, ಶಾಸಕ ಸಂಜೀವ ಮಠಂದೂರು ವಿರೋಧಿಗಳು ಮಾಡಿರುವ ದುಷ್ಕೃತ್ಯವಾಗಿದೆ ಎಂದು ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಗುಂಡ್ಯ ಹೇಳಿದ್ದಾರೆ.

ಅವರು ಇಂದು ಗುರುವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಲ್ಲಿನ ಘಟನೆಗೆ ನಾನು ಪ್ರತ್ಯಕ್ಷದರ್ಶಿಯಾಗಿದ್ದೇನೆ. ಒಬ್ಬ ಸಜ್ಜನ ಶಾಸಕ ತನ್ನ ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಅಭಿವೃದ್ಧಿ ಕಾರ್ಯವನ್ನು ಸಹಿಸದ ಕೆಲವು ಕಿಡಿಗೇಡಿಗಳು ಶಾಸಕರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಅವರು ಆರೋಪಿದರು.


Ad Widget

Ad Widget

Ad Widget

ಘಟನೆಯ ಕುರಿತು ವಿವರ ನೀಡಿದ ಅವರು, ಗುಂಡ್ಯದ ನಿರ್ಜನ ಪ್ರದೇಶದಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕ ಇರುವುದನ್ನು ಪತ್ತೆ ಹಚ್ಚಿದಾಗ ಯುವಕ ತಪ್ಪಿಕೊಳ್ಳಲು ಯತ್ನಿಸಿ ಕಾಲ್ಕಿತ್ತಿದ್ದಾನೆ. ಈ ಸಂದರ್ಭದಲ್ಲಿ ಬಿದ್ದು ಆತನಿಗೆ ಪೆಟ್ಟಾಗಿದೆಯೇ ಹೊರತು, ಆತನಿಗೆ ಯಾರೂ ಹಲ್ಲೆ ನಡೆಸಿಲ್ಲ. ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ನಮ್ಮ ಹಿಂದೂ ಕಾರ್ಯಕರ್ತರು ಆರೋಪಿಯನ್ನು ವಿಚಾರಿಸಿದಾಗ ಆತ ಅನ್ಯ ಕೋಮಿನ ಯುವಕ ಎಂದು ಗೊತ್ತಾದಾಗ ಜನ ಸೇರಿದ್ದರು. ಮಾತ್ರವಲ್ಲ ಪೋಲೀಸರಿಗೂ ಮಾಹಿತಿ ನೀಡಲಾಗಿತ್ತು.

ತಕ್ಷಣ ಸ್ಥಳಕ್ಕಾಗಮಿಸಿದ ಪೋಲೀಸರು ಜೋಡಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಇದೇ ವೇಳೆ ಆರೋಪಿ ನಝೀರ್ ತನಗೆ ಹಲ್ಲೆ ನಡೆಸಲಾಗಿದೆ ಎಂದು ದೂರು ನೀಡಿದ ಬೆನ್ನಲ್ಲೇ ನಮ್ಮ ಇಬ್ಬರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಮಾತ್ರವಲ್ಲ ಇನ್ನಷ್ಟು ಜನರನ್ನು ವಶಕ್ಕೆ ಪಡೆಯಲು ಪೋಲೀಸರ ದಂಡೇ ಗುಂಡ್ಯಕ್ಕೆ ಆಗಮಿಸಿತ್ತು. ಆಗ ಶಾಸಕರಿಗೆ ಕರೆ ಮಾಡಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ ಎಂದು ತಿಳಿಸಿದ್ದೆವು.

ಅದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು, ಪೋಲೀಸ್ ಉನ್ನತಾಧಿಕಾರಿಗಳಿಗೆ ಸೂಚನೆ ನೀಡಿ ಅಮಾಯಕ ಹಿಂದೂ ಕಾರ್ಯಕರ್ತರಿಗೆ ತೊಂದರೆ ನೀಡಬಾರದು ಎಂದು ಹೇಳಿದರು. ಇದರ ಪರಿಣಾಮ ಕಾರ್ಯಕರ್ತರನ್ನು ಬಂಧಿಸಲು ಆಗಮಿಸಿದ್ದ ಪೊಲೀಸ್ ದಂಡು ವಾಪಾಸ್ಸಾಗಿದೆ. ಬಳಿಕ ನಡೆದ ಬೆಳವಣಿಗೆಯಲ್ಲಿ ಬೆಂಗಳೂರಿಗೆ ತೆರಳಲು ಸಜ್ಜಾಗಿ ಉಪ್ಪಿನಂಗಡಿಯ ಆದಿತ್ಯ ಹೋಟೆಲ್ ಬಳಿಯಿದ್ದ ಶಾಸಕರನ್ನು ಭೇಟಿ ಮಾಡಿದೆವು.

ಆಗ ಅವರು ನಮ್ಮ ಪ್ರಮುಖರು ಹಾಗೂ ಕಾರ್ಯಕರ್ತರಿಗೆ ಘಟನೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯೊಂದಿಗೆ ವ್ಯವಹರಿಸಿದ ರೀತಿ ಹಾಗೂ ಪೋಲಿಸರು ಮಾಡುತ್ತಿರುವ ಕಾರ್ಯದ ಬಗ್ಗೆ ಸಮಾಧಾನವಾಗಿ ವಿವರಿಸಿದ್ದಾರೆ. ಈ ವೇಳೆ ಎಲ್ಲಾ ಕಾರ್ಯಕರ್ತರು ಸಮಾಧಾನಗೊಂಡಿದ್ದರು. ಆದರೆ ಯಾರೋ ಕೆಲವು ಕಾರ್ಯಕರ್ತರಲ್ಲದ ಕಿಡಿಗೇಡಿಗಳು ಸೇರಿಕೊಂಡು ಉದ್ದೇಶ ಪೂರ್ವಕವಾಗಿ ಶಾಸಕರ ತೇಜೋವಧೆ ಮಾಡಲು ಘೋಷಣೆ ಕೂಗಿದ್ದಾರೆ.

ಶಾಸಕರು ಯಾವುದೇ ಉದ್ವೇಗಕ್ಕೆ ಒಳಗಾಗದೆ ಶಾಂತವಾಗಿ ಕಾರ್ಯಕರ್ತರನ್ನು ಸಮಾಧಾನಿಸಿರುತ್ತಾರೆ. ಚುನಾವಣೆ ಹೊಸ್ತಿಲಲ್ಲಿನ ಸಂದರ್ಭದಲ್ಲಿ ಶಾಸಕರಿಗೆ ಕೆಟ್ಟ ಹೆಸರು ಬರುವಂತೆ ಮಾಡುತ್ತಿರುವುದು ಕಂಡು ಬರುತ್ತಿದೆ. ಶಾಸಕರು ಯಾವುದೇ ರೀತಿಯ ಹಿಂದೂ ವಿರೋಧಿ ಹೇಳಿಕಯನ್ನು ನೀಡಿಲ್ಲ. ಈ ಹಿಂದೆ ಕೂಡಾ ಶಾಸಕರು ಹಿಂದೂ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸದೆ ಹೋದ ಉದಾಹರಣೆಗಳಿಲ್ಲ.

ಹಿಂದೂ ಕಾರ್ಯಕರ್ತರಿಗೆ ತೊಂದರೆಯಾದಾಗ ಸ್ವತಃ ಶಾಸಕರು ಖದ್ದಾಗಿ ಹೋಗಿ ಸಮಸ್ಯೆ ಬಗೆಹರಿಸಿದ ಅದೆಷ್ಟೋ ಉದಾಹರಣೆ ಇದೆ. ನಮ್ಮ ಪರಿವಾರ ಸಂಘಟನೆಗಳಲ್ಲಿ ಯಾವುದೇ ಗೊಂದಲಗಳಿಲ್ಲ. ದ್ವೇಷವಾಗಲಿ, ವೈಷ್ಯಮ್ಯವಾಗಲಿ ನಮ್ಮೊಳಗಿಲ್ಲ. ನಾವೆಲ್ಲಾ ಒಗ್ಗಟ್ಟಿನಿಂದ ಇದ್ದೇವೆ ಎಂದು ದಾಮೋದರ ಗುಂಡ್ಯ ಸ್ಪಷ್ಟಪಡಿಸಿದರು.

ಅಲ್ಲಿ ಸುಬ್ರಹ್ಮಣ್ಯ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶಿವಪ್ರಸಾದ್ ನಡುತೋಟ ಮಾತನಾಡಿ ಅಮಾಯಕ ಹಿಂದೂ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೊಂಬಾರು ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಪ್ರಸಾದ್, ಸಿರಿಬಾಗಿಲು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ನಾರಾಯಣ ನೀರಾಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!
Scroll to Top
%d bloggers like this: