ಮಲಗಿದ್ದಾಗ ಬಾಲಕಿ, ನಿದ್ದೆಯಿಂದ ಏಳುವಾಗ 21 ವಯಸ್ಸಿನ ನವ ತರುಣಿ !! | ಓದುಗರಿಗೆ ದಿಗ್ಭ್ರಮೆ ಮೂಡಿಸುವ ಕಥೆ ಇಲ್ಲಿದೆ ನೋಡಿ
ಒಮ್ಮೊಮ್ಮೆ ಈ ಪ್ರಪಂಚ ಎಂಬುದು ಚಿತ್ರ-ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುವ ವೇದಿಕೆ ಎಂದೇ ಹೇಳಬಹುದು. ಜಗತ್ತಿನ ಯಾವುದಾದರೂ ಮೂಲೆಗಳಿಂದ ಪ್ರತಿನಿತ್ಯ ಏನಾದರೊಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವು ಘಟನೆಗಳನ್ನು ನೋಡಿದರೆ ಹೀಗೂ ಉಂಟಾ….ಎಂಬ ಪ್ರಶ್ನೆ ನಮ್ಮನ್ನೆ ಕಾಡತೊಡಗುತ್ತದೆ. ಅಂಥದ್ದೇ ನಿಮಗೆ ದಿಗ್ಬ್ರಮೆ ಉಂಟಾಗುವ ಕಥೆಯೊಂದು ಹೀಗಿದೆ ನೋಡಿ.
ಸುಮಾರು 150 ವರ್ಷಗಳ ಹಿಂದೆ ಬ್ರಿಟನ್ನಲ್ಲಿ ಒಂದು ಹೆಣ್ಣು ಮಗು ಜನಿಸಿತು. ಆಕೆ ತನ್ನ ನಿದ್ರೆಯ ಕಾರಣದಿಂದ ಪ್ರಪಂಚದಾದ್ಯಂತ ಜನರಿಗೆ ಶಾಕ್ ನೀಡಿದ್ದಳು. ಯಾಕೆಂದರೆ ಈ ಹುಡುಗಿ ಬರೋಬ್ಬರಿ 9 ವರ್ಷಗಳವರೆಗೆ ನಿದ್ದೆಯಿಂದ ಏಳಲಾರದ ಸ್ಥಿತಿ ತಲುಪಿದ್ದಳು !! ಅರೇ ಏನಿದು ಹೀಗೆ ಅಂತೀರಾ.. ಇಲ್ಲಿದೆ ನೋಡಿ ಇದರ ಕಂಪ್ಲೀಟ್ ಸ್ಟೋರಿ.
ಹೌದು. ವರದಿಯ ಪ್ರಕಾರ, 1859ರ ಮೇ 15ರಂದು ಎಲೆನ್ ಸ್ಯಾಡ್ಲರ್ ಎಂಬ ಹುಡುಗಿ ಇಂಗ್ಲೆಂಡ್ನಲ್ಲಿ ಜನಿಸಿದಳು. ಆಕೆಗೆ ಒಟ್ಟು 12 ಒಡಹುಟ್ಟಿದವರಿದ್ದರು. ಹುಡುಗಿಯ ಕುಟುಂಬವು ಟರ್ವಿಲ್ಲೆ ಎಂಬ ಹಳ್ಳಿಯಲ್ಲಿ ವಾಸಿಸುತ್ತಿತ್ತು. ಈ ಗ್ರಾಮವು ಆಕ್ಸ್ಫರ್ಡ್ ಮತ್ತು ಬಕಿಂಗ್ಹ್ಯಾಮ್ಶೈರ್ ನಡುವೆ ಇದೆ. ಈ ಹುಡುಗಿ ಹುಟ್ಟುವ ಸಮಯದಲ್ಲಿ ಎಲ್ಲವೂ ಸರಿಯಾಗಿತ್ತು, ಆದರೆ ಹುಡುಗಿಗೆ 12 ವರ್ಷ ತುಂಬಿದಾಗ ಒಂದು ರಾತ್ರಿ ಅವಳು ವಿಚಿತ್ರ ಕಾಯಿಲೆಗೆ ಒಳಗಾದಳು. ಇದನ್ನು ಕಂಡು ಪ್ರಪಂಚದಾದ್ಯಂತ ಇರುವ ವೈದ್ಯರೇ ಅಚ್ಚರಿಪಟ್ಟಿದ್ದರು.
ಹುಡುಗಿಯ ತಂದೆ ಬಾಲ್ಯದಲ್ಲಿಯೇ ತೀರಿಕೊಂಡಿದ್ದರು. ಇದಾದ ನಂತರ ಅವರ ತಾಯಿ 2ನೇ ಮದುವೆಯಾದರು. 1871ರ ಮಾರ್ಚ್ 29ರಂದು ಎಲೆನ್ ಎಂದಿನಂತೆ ತನ್ನ ಒಡಹುಟ್ಟಿದವರ ಜೊತೆ ಮಲಗಲು ಹೋದಳು. ಇದಾದ ನಂತರ ಮರುದಿನ ಬೆಳಗ್ಗೆ ಬಂದಾಗ ಮನೆಯವರೆಲ್ಲ ಎದ್ದರೂ, ಎಲೆನ್ ಮಾತ್ರ ನಿದ್ದೆಯಿಂದ ಏಳಲಿಲ್ಲ. ಬಳಿಕ ಮನೆಯವರೆಲ್ಲ ಸೇರಿ ಆಕೆಯನ್ನು ಎಬ್ಬಿಸಲು ಎಷ್ಟೇ ಹರಸಾಹಸ ಮಾಡಿದರೂ ಪ್ರಯೋಜನವಾಗಲಿಲ್ಲ. ಆಕೆಯ ಮೈಮೇಲೆ ನೀರು ಸುರಿದರೂ ಆಕೆಗೆ ಎಚ್ಚರವಾಗಲಿಲ್ಲ.
ಬಳಿಕ ಕುಟುಂಬಸ್ಥರು ಆಕೆ ಮೃತಪಟ್ಟಿದ್ದಾಳೆಂದು ಭಾವಿಸಿದ್ದರು. ಆಕೆಯ ನಾಡಿಮಿಡಿತ ಗಮನಿಸಿ ತಕ್ಷಣವೇ ವೈದ್ಯರ ಬಳಿ ಕರೆದೊಯ್ದಿದ್ದಾರೆ. ವೈದ್ಯರು ಬಾಲಕಿಯ ಆರೋಗ್ಯವನ್ನು ಪರೀಕ್ಷಿಸಿದಾಗ ಆಕೆ ಹೈಬರ್ನೇಶನ್ ಸ್ಥಿತಿಗೆ ತಲುಪಿರುವುದು ಗೊತ್ತಾಗಿದೆ. ಸಾಕಷ್ಟು ಪ್ರಯತ್ನ ಮಾಡಿದರೂ ವೈದ್ಯರಿಗೆ ಏನೂ ಮಾಡಲಾಗಲಿಲ್ಲ. ಬಾಲಕಿ ಯಾವ ಕಾಯಿಲೆಯಿಂದ ಬಳಲುತ್ತಿದ್ದಾಳೆಂದು ಸ್ವತಃ ವೈದ್ಯರಿಗೇ ತಿಳಿಯಲಿಲ್ಲ. ಆಕೆಗೆ ಬಂದಿರುವ ಕಾಯಿಲೆಯ ಬಗ್ಗೆ ಬ್ರಿಟನ್ನಾದ್ಯಂತ ವ್ಯಾಪಕ ಚರ್ಚೆಯಾಯಿತು. ಆಕೆಯನ್ನು ನೋಡಲು ದೇಶ-ವಿದೇಶದಿಂದ ಜನರು ಬರುತ್ತಿದ್ದರು.
ಕೋಮಾ ಸ್ಥಿತಿಯಲ್ಲಿದ್ದ ಮಗುವನ್ನು ಬದುಕಿಸಲು ತಾಯಿ ಗಂಜಿ, ಹಾಲು ಮುಂತಾದ ವಸ್ತುಗಳನ್ನು ನೀಡುತ್ತಿದ್ದರು. ಹೀಗೆ 9 ವರ್ಷಗಳು ಕಳೆದರೂ ಹುಡುಗಿಗೆ ಪ್ರಜ್ಞೆ ಬಂದಿರಲಿಲ್ಲ. ಒಂದು ದಿನ ಹುಡುಗಿಯ ತಾಯಿ ಹೃದಯಾಘಾತದಿಂದ ನಿಧನರಾದರು. ತಾಯಿಯ ಮರಣದ 5 ತಿಂಗಳ ನಂತರ ಒಂದು ದಿನ ಬಹು ದೊಡ್ಡ ಪವಾಡವೇ ಸಂಭವಿಸಿತು. ಹುಡುಗಿಗೆ ಬರೋಬ್ಬರಿ 9 ವರ್ಷಗಳ ಬಳಿಕ ಎಚ್ಚರವಾಯಿತು. ಅವಳು ಮಲಗಿದ್ದಾಗ ಆಕೆಗೆ 12 ವರ್ಷ ವಯಸ್ಸಾಗಿತ್ತು, ಆಕೆಗೆ ಎಚ್ಚರವಾದಾಗ 21 ವರ್ಷವಾಗಿತ್ತು. ಆದರೆ ಹುಡುಗಿ ಅನೇಕ ವರ್ಷಗಳ ಬಳಿಕ ಎಚ್ಚರವಾದಾಗ ಆಕೆಯ ತಾಯಿ ಮೃತಪಟ್ಟಿದ್ದರು.
ಹಾಗಾಗಿ ತಾಯಿಗೆ ತನ್ನ ಮಗಳು ಮರಳಿ ಓಡಾಡುವುದನ್ನು ನೋಡುವ ಭಾಗ್ಯವೇ ಸಿಗಲಿಲ್ಲ. ಅದಲ್ಲದೆ 9 ವರ್ಷಗಳ ಕಾಲ ತನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ತಾಯಿಯನ್ನು ಮತ್ತೆ ನೋಡಲಾಗಲಿಲ್ಲ ಆ ಬಾಲಕಿಗೆ. ಆದರೂ ಬರೋಬ್ಬರಿ 9 ವರ್ಷಗಳ ನಂತರ ಆಕೆ ಮತ್ತೆ ಸರಿ ಹೋದದ್ದು ಇಡೀ ದೇಶದಲ್ಲಿ ಹೊಸ ಸಂಚಲನ ಮೂಡಿಸಿದ್ದು ಮಾತ್ರ ಸುಳ್ಳಲ್ಲ.