ಪರಿಶಿಷ್ಟ ಜಾತಿ/ಪಂಗಡದ ಬಡವರಿಗೆ ರಾಜ್ಯ ಸರಕಾರದಿಂದ ಜೋಡಿ ಸಿಹಿ ಸುದ್ದಿ |ಭೂ ಒಡೆತನ ಯೋಜನೆ, ಸಹಾಯಧನ, ವಸತಿ ಸಬ್ಸಿಡಿ ಹೆಚ್ಚಳ!!!
ಪರಿಶಿಷ್ಟ ಜಾತಿ/ಪಂಗಡದ ಬಡವರಿಗೆ ರಾಜ್ಯ ಸರ್ಕಾರ ಜೋಡಿ ಸಿಹಿಸುದ್ದಿಯೊಂದನ್ನು ಪ್ರಕಟಿಸಿದೆ. ಈ ಸಮುದಾಯದ ಬಡವರು ಭೂ ಒಡೆಯರಾಗುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಭೂ ಒಡೆತನ ಯೋಜನೆಯಡಿ ನೀಡುತ್ತಿರುವ ಸಹಾಯಧನ ಮೊತ್ತವನ್ನು 15 ರಿಂದ 20 ಲಕ್ಷ ರೂ.ಗೆ ಹೆಚ್ಚಿಸುವ ಹಾಗೂ ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಮನೆ ನಿರ್ವಣಕ್ಕಾಗಿ ನೀಡುವ ಸಬ್ಸಿಡಿ ಮೊತ್ತವನ್ನು 1.75 ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‌ರಾಂ ಅವರ 115ನೇ ಜಯಂತಿ, ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಈ ಮಾತನ್ನು ಹೇಳಿದರು.
ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ವಿಶೇಷ ತರಬೇತಿ ನೀಡುವ ಯೋಜನೆಯನ್ನು ಈ ವರ್ಷ ಪ್ರಾರಂಭಿಸಲಾಗುವುದು. ಹಾಗೆನೇ ‘ಮುಖ್ಯಮಂತ್ರಿ ಮಾರ್ಗದರ್ಶಿನಿ’ ವೇದಿಕೆ ಮೂಲಕ 8 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು. ಅಲ್ಲದೆ, ಈ ಸಮುದಾಯಗಳಿಗೆ ನವೋದ್ಯಮದಲ್ಲಿ ತೊಡಗಿಕೊಳ್ಳಲು ಉತ್ತೇಜನ ನೀಡುವುದಕ್ಕಾಗಿ 50 ಲಕ್ಷ ರೂ. ಸಹಾಯಧನ ನೀಡುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಹೇಳಿದರು.