ರಾಜ್ಯದ ಜನತೆಗೆ ವಿದ್ಯುತ್ ಶಾಕ್ !! | ಯೂನಿಟ್ ಗೆ 35 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ ಕೆಇಆರ್‌ಸಿ
ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್ ಒಂದಿದೆ. ಪೆಟ್ರೋಲ್, ಡೀಸೆಲ್ ಬೆಲೆ ಪೈಸೆ ಪೈಸೆ ಲೆಕ್ಕದಲ್ಲಿ ಏರಿಕೆಯ ನಡುವೆ ಸರ್ಕಾರ ರಾಜ್ಯದ ಜನತೆಗೆ ವಿದ್ಯುತ್ ಶಾಕ್ ನೀಡಿದ್ದು, ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳವಾಗಿದೆ.
ಯುಗಾದಿ ಸಂಭ್ರಮದಿಂದ ಈಗಷ್ಟೇ ಹೊರಬಂದ ರಾಜ್ಯದ ಜನತೆ ತೈಲ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಹೋಟೆಲ್ ಆಹಾರದ ದರ ಏರಿಕೆ ಬಳಿಕ ಇದೀಗ ವಿದ್ಯುತ್ ಬರೆ ಎಳೆದಿದೆ. ವಿದ್ಯುತ್ ದರವನ್ನು ಹೆಚ್ಚಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ. ಬೆಸ್ಕಾಂ ಸೇರಿ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಪ್ರತಿ ಯೂನಿಟ್ ವಿದ್ಯುತ್ ದರವನ್ನು 35 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ ಅಧ್ಯಕ್ಷ ಮಂಜುನಾಥ್ ಆದೇಶ ಹೊರಡಿಸಿದ್ದಾರೆ.
ಎಸ್ಕಾಂಗಳು ಪ್ರತಿ ಯೂನಿಟ್ ವಿದ್ಯುತ್ ದರವನ್ನು 1.85 ರೂ.ವರೆಗೂ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಸರ್ಕಾರದ ಜೊತೆಗಿನ ಮಾತುಕತೆ ಬಳಿಕ ಯೂನಿಟ್ ವಿದ್ಯುತ್ ದರವನ್ನು 35 ಪೈಸೆ ಹೆಚ್ಚಿಸಿ ಆದೇಶ ಹೊರಬಿದ್ದಿದೆ.
ಒಂದು ಕಡೆ ಸರ್ಕಾರ ದರ ಏರಿಕೆ ಶಾಕ್ ಕೊಟ್ಟರೆ ಇನ್ನೊಂದು ಕಡೆ ಹೋಟೆಲ್ ಮಾಲೀಕರ ಸಂಘ ಶೇ.10ರಷ್ಟು ಆಹಾರ ದರ ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಕಳೆದ 14 ದಿನಗಳಿಂದ ತೈಲ ಬೆಲೆ ಏರಿಕೆಯಾಗಿದ್ದು, ಇದುವರೆಗೆ 8 ರೂಪಾಯಿ 40 ಪೈಸೆ ಜಾಸ್ತಿ ಆಗಿದೆ. ಇಂದು ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 109.41 ರೂ. ಮತ್ತು ಡೀಸೆಲ್ ಬೆಲೆ 93.23 ರೂ. ತಲುಪಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.