ಕ್ರೀಡಾ ಇಲಾಖೆಯು
2020-21 ನೇ ಸಾಲಿನ ಕ್ರೀಡಾ ಪ್ರಶಸ್ತಿಗಳನ್ನ ಇಂದು ಘೋಷಣೆ ಮಾಡಿದೆ. ಈ ಬಗ್ಗೆ ಯುವಜನ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದಾರೆ.
ಏಕಲವ್ಯ ಪ್ರಶಸ್ತಿಗೆ 15 ಕ್ರೀಡಾಪಟುಗಳು, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ 14 ಕ್ರೀಡಾಪಟುಗಳು, ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ 10 ಕ್ರೀಡಾಪಟುಗಳು ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ ಇಬ್ಬರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ವಿಜೇತರಲ್ಲಿ ಕರಾವಳಿಯ ನಾಲ್ವರು ಪ್ರತಿಭೆಗಳಿರೋದು ಹೆಮ್ಮೆ ವಿಚಾರ. ಕಬಡ್ಡಿಯಲ್ಲಿ ಪುತ್ತೂರಿನ ಮುತ್ತು ಪ್ರಶಾಂತ್ ರೈ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದರೆ, ವಾಲಿಬಾಲ್ ನಲ್ಲಿ ಎಸ್ ಡಿ ಎಂ ಕಾಲೇಜಿನ ಅಶ್ವಲ್ ರೈ ಹಾಗೂ ನೆಟ್ ಬಾಲ್ ನಲ್ಲಿ ನಿತಿನ್ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಏಕಲವ್ಯ ಪ್ರಶಸ್ತಿ ಕರ್ನಾಟಕವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ ಅತ್ಯುತ್ತಮ ಕ್ರೀಡಾಪಟುಗಳಿಗೆ ಕರ್ನಾಟಕ ಸರ್ಕಾರ ರಾಷ್ಟ್ರೀಯ ಕ್ರೀಡಾ ದಿನದಂದು ನೀಡುವ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯದ ಕ್ರೀಡಾಪಟುಗಳಿಗೆ 1992 ರಿಂದ ನೀಡಲಾಗುತ್ತಿದೆ. ಈ ಪ್ರಶಸ್ತಿಯು ಏಕಲವ್ಯನ ಕಂಚಿನ ಪ್ರತಿಮೆ, ಸ್ಕ್ರೋಲ್, ಸಮವಸ್ತ್ರ ಮತ್ತು 2 ಲಕ್ಷ ನಗದು ಬಹುಮಾನ ಒಳಗೊಂಡಿರುತ್ತದೆ.