ನಾಗದೇವರಿಗೆ ಕೋಳಿ ಬಲಿಕೊಡುವ ಮೂಲಕ ಪೂಜಿಸುತ್ತಾರಂತೆ ಈ ಗ್ರಾಮದ ಭಕ್ತರು!!|ಈ ಪದ್ಧತಿಯ ಹಿಂದಿರುವ ನಂಬಿಕೆ ಏನು ಗೊತ್ತೇ!?

0 10

ಎಲ್ಲಿ ನಾಗ ದೇವರು ಇರುತ್ತಾರೋ ಅಲ್ಲಿ ಶುದ್ಧತೆಯಿಂದ ಇರೋದು ಸಾಮಾನ್ಯ. ಅಂದರೆ ಕೋಳಿ, ಕುರಿ ಯಾವುದೇ ಮಾಂಸ ಬನದ ಬಳಿ ತರುವುದಿಲ್ಲ.ಅದಕ್ಕೆ ಅದರದೇ ಆದ ಸಂಪ್ರದಾಯವಿದೆ.ಒಂದು ವೇಳೆ ತಂದರೆ ಅದು ದೋಷವೆಂದೆ ಹೇಳಬಹುದು. ಆದರೆ ಇಲ್ಲೊಂದು ಕಡೆ ನಾಗ ದೇವರಿಗೆ ಕೋಳಿಯನ್ನು ಬಲಿಕೊಡುವ ಪದ್ಧತಿ!!

ಹೌದು.ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯಲ್ಲಿ ಸುಮಾರು 1800 ವರ್ಷದ ಇತಿಹಾಸವಿರುವ ಶ್ರೀ ನಾಗದೇವರ ವಿಗ್ರಹವಿದೆ.ಕರಿನಾಗ ಎಂದೇ ಜನಪ್ರಿಯವಾಗಿರುವ , ಹೊಳವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಪ್ಪ ಗೊಂಡನಹಳ್ಳಿಯಲ್ಲಿ ನೆಲೆಸಿರುವ ಸ್ವಾಮಿ ದೇವಸ್ಥಾನಕ್ಕೆ ವಸಂತಕಾಲದ ಯುಗಾದಿ ಹಬ್ಬದ ಹಿಂದಿನ ದಿನದಂದು ಆದಿಜಾಂಬವ ಜನಾಂಗದವರಾದ ನೂರಾರು ಭಕ್ತರು ಬರುತ್ತಾರೆ. ಚರ್ಮವ್ಯಾದಿ, ಕಣ್ಣು, ಮೂಗು, ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ದೇವರ ಅನುಗ್ರಹವೇ ಪರಿಹಾರ ಎಂಬ ನಂಬಿಕೆ.

ನಾಗದೋಷ ನಿವಾರಣೆಗಾಗಿ ಇಲ್ಲಿಗೆ ಬರುವವರೇ ಹೆಚ್ಚಾಗಿದ್ದಾರೆ. ಶತಮಾನಗಳ ಹಿಂದೆ ಹರಪ್ಪ ಗೊಂಡನಹಳ್ಳಿ ಪುಟ್ಟ ಗ್ರಾಮವಿದ್ದು, ಪ್ರತಿ ವರ್ಷ ಯುಗಾದಿ ನಂತರ ದಿನದಂದು ನಡೆಯುವ ಪೂಜೆಯ ದಿನದೊಂದು ಅನ್ನಾಹಾರ ಸೇವಿಸದೆ ಕಾಲ್ನಡಿಗೆ ಮೂಲಕ ಹೋಗಿ ಪೂಜೆ ಸಲ್ಲಿಸುತಿದ್ದರು.ಓಬಳಯ್ಯ ಎಂಬ ವ್ಯಕ್ತಿಗೆ ಸ್ವಪ್ನದಲ್ಲಿ ಸ್ವಾಮಿ ಕಾಣಿಸಿಕೊಂಡು, ದಕ್ಷಿಣ ದಿಕ್ಕಿನಲ್ಲಿ ಒಂದು ಉತ್ತದಲ್ಲಿ ತಾನಿರುವುದಾಗಿ, ತನ್ನನ್ನು ಹುಡುಕಿ ಪ್ರತಿಷ್ಠಾಪನೆ ನಡೆಸಬೇಕು ಎಂದು ತಿಳಿಸಿದ್ದಾರೆ. ಸ್ವಪ್ನ ವೃತ್ತಾಂತವನ್ನು ಗ್ರಾಮಸ್ಥರಿಗೆ ತಿಳಿಸಿದ ಓಬಳಯ್ಯ ತನ್ನ ಸಂಬಂಧಿಕರನ್ನು ಕರೆದುಕೊಂಡು ಹುತ್ತವನ್ನು ಹುಡುಕಾಟ ನಡೆಸಿದ್ದಾರೆ.

ಕೆಲವು ಸಮಯದ ನಂತರ ಮನೆಗೆ ಬಂದು ಆಯಾಸದಿಂದ ಕೋಣೆಯಲ್ಲಿ ಮಲಗಿದ ನಂತರ ಅವರಿದ್ದ ಒಂದು ಸ್ಥಳದಿಂದ ಓಂ ಎಂದು ಶಬ್ದವನ್ನು ಕೇಳಿಸಿಕೊಂಡು ಹೊರಗೆ ಬಂದು ನೋಡಿದರೆ ದಕ್ಷಿಣ ದಿಕ್ಕಿನಲ್ಲಿ ಬೇವಿನ ಮರದ ಕೆಳಗಡೆ ಹುತ್ತದಿಂದ ಓಂ ಎಂಬ ಶಬ್ದವನ್ನು ಕೇಳಿ ಹುತ್ತ ಇದ್ದ ಸ್ಥಳವನ್ನು ಅಗೆದು ನೋಡಿದಾಗ ಹೆಡೆ ಸುತ್ತಿಕೊಂಡಿರುವ ನಾಗರ ವಿಗ್ರಹ ಸಿಕ್ಕಿದೆ. ವಿಗ್ರಹ ಸ್ವಪ್ನದಲ್ಲಿ ದೇವರು ನಿರ್ದೇಶನ ನೀಡಿದಂತೆ ತಟದಲ್ಲಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.

ದೈವ ಪ್ರೇರಣೆಯಂತೆ ದೇಗುಲ ನಿರ್ಮಿಸಿದ್ದಾರೆ. ಜಾಂಬವ ಜನಾಂಗದ ವಂಶಸ್ಥರು, ಕಿವಿಯಲ್ಲಿ ಕೀವು ಸೋರುವುದು, ಕಣ್ಣಿನ ಸಮಸ್ಯೆ, ಉಸಿರಾಟ, ಚರ್ಮ ಸಮಸ್ಯೆ, ವಿವಾಹ, ಸಂತಾನ ಭಾಗ್ಯ, ಇಲ್ಲಿಗೆ ಬಂದು ಸಮಸ್ಯೆ ಪರಿಹರಿಸಿಕೊಂಡಿರುವುದಾಗಿ ಭಕ್ತರು ತಿಳಿಸುತ್ತಾರೆ. “ಸುಮಾರು ವರ್ಷಗಳಿಂದ ನಮ್ಮ ತಾತಂದಿರು, ಈ ನಾಗ ದೇವರಿಗೆ ಯುಗಾದಿ ಹಬ್ಬದ ಮರುದಿನ ಉಪವಾಸವಿದ್ದು ಈ ದೇವರಿಗೆ ಪೂಜೆಗೆ ಕೋಳಿಯನ್ನು ಬಲಿಕೊಟ್ಟು ಸಂಪ್ರದಾಯವಿದೆ. ಹಿಂದೆ ನಮ್ಮ ಹಿರಿಯರು ಏನು ಮಾಡಿಕೊಂಡು ಬರುತ್ತಿದ್ದರು ಈಗಿನ ಪೀಳಿಗೆ ಅದೇ ರೀತಿ ಮುಂದುವರಿಸಿಕೊಂಡು ಬರುತ್ತಿದ್ದೇವೆ. ನಮ್ಮ ಮಕ್ಕಳು ದೇಶದ ಯಾವುದೇ ಮೂಲೆಯಲ್ಲಿದ್ದರೂ ಯುಗಾದಿಯ ದಿನದಂದು ಬರದಿದ್ದರೂ ಈ ದಿನದಂದು ಗ್ರಾಮಕ್ಕೆ ಬರಲೇಬೇಕು ಈ ನಾಗದೇವರಿಗೆ ಪೂಜೆಯನ್ನು ಮಾಡಲೇಬೇಕು”ಎಂದು ಹನುಮಂತರಾಯಪ್ಪ. ಪೂಜಾರ್, ಮಾಜಿ ಗ್ರಾಪಂ ಸದಸ್ಯರು ಹೇಳಿದ್ದಾರೆ.

ಈ ದೇವರಿಗೆ ಯುಗಾದಿ ಹಬ್ಬದ ನಂತರ ದಿನದಂದು ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ.ಇದರ ವಿಶೇಷವೇನೆಂದರೆ ನಮ್ಮ ಮನೆಯ ಅಂಗಳಕ್ಕೆ ಬೇರೆಯವರು ಬರುವುದಿಲ್ಲ. ನಮ್ಮ ಅಕ್ಕ ತಂಗಿಯರು ಮದುವೆಯಾದ ನಂತರ ಈ ಒಂದು ಪೂಜೆಗೆ ಬರುವುದು ಬೇಕಾಗಿಲ್ಲ. ತಂದೆಯವರು ಯುಗಾದಿಯ ಹಬ್ಬದ ಮಾರನೇ ದಿನ ಈ ದೇವರ ಪೂಜೆಗೆಂದು ಕೋಳಿಯನ್ನು ಬಲಿಕೊಟ್ಟು ಆಶೀರ್ವಾದ ಪಡೆಯುತ್ತಿದ್ದೇವೆ ಎಂದು ಗ್ರಾಮಸ್ಥರಾದ ಅಂಜನ್ ಮೂರ್ತಿ ಹೇಳಿದ್ದಾರೆ.

Leave A Reply