ಬ್ರಹ್ಮಾವರ : ಒಂಟಿ ಮಹಿಳೆಯಿದ್ದ ಮನೆಯಲ್ಲಿ ದರೋಡೆ| ಒಂದೇ ದಿನದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು!

ಬ್ರಹ್ಮಾವರ: ಮನೆಯಲ್ಲಿದ್ದ ಒಂಟಿ ಮಹಿಳೆ ಮನೆಗೆ ನುಗ್ಗಿ ಹಾಡುಹಗಲೇ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು 24 ಗಂಟೆಯೊಳಗೆ ಬ್ರಹ್ಮಾವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಬೆಂಗಳೂರು ಯಶವಂತಪುರ ಮೋಹನ್ ಕುಮಾರ್ ನಗರ ನಿವಾಸಿ ಸುರೇಶ್ ಯಾನೆ ಸೂರ್ಯ (31) ಬಂಧಿತ ಆರೋಪಿ. ಈತ ಮೂಲತಃ ಬ್ರಹ್ಮಾವರ ತಾಲೂಕಿನ ಪೆಜಮಂಗೂರು ಗ್ರಾಮದ ಪ್ರಗತಿ ನಗರ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಬ್ರಹ್ಮಾವರ ಚೇರ್ಕಾಡಿ ಗ್ರಾಮದ ಕನ್ನಾರು ಎಂಬಲ್ಲಿ ವಾಸು ಪೂಜಾರಿ ಎಂಬವರ ಹೆಂಡತಿ ಪ್ರೇಮ ಅವರು ಮನೆಯ ಹೊರಗಡೆ ಪಾತ್ರೆ ತೊಳೆಯುತ್ತಿದ್ದ ವೇಳೆ ಮನೆ ಹಿಂಬದಿಯ ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿದ ಸುರೇಶ್ ಮನೆಯನ್ನು ಜಾಲಾಡಿ ಸುಮಾರು 10 ಗ್ರಾಂ ತೂಕದ ಚಿನ್ನದ ನೆಕ್ಸಸ್ ಅನ್ನು ಕಳವು ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಇದನ್ನು ನೋಡಿದ ಪ್ರೇಮ ತನ್ನ ಪತಿಗೆ ಮಾಹಿತಿ ನೀಡಿದ್ದು, ಅವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಮಾಹಿತಿ ಸಂಗ್ರಹಿಸಿ, ಆರೋಪಿ ಕಳವು ಮಾಡಿದ ದಿವಸ ಧರಿಸಿದ ಬಟ್ಟೆಯ ಜಾಡನ್ನು ಹಿಡಿದು ಪತ್ತೆ ಆರೋಪಿಯನ್ನು ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 50 ಸಾವಿರ ರೂ ಬೆಲೆಬಾಳುವ ಚಿನ್ನದ ನೆಕ್ಸಸ್ ನ್ನು ವಶಪಡಿಸಿಕೊಂಡಿದ್ದಾರೆ . ಈ ಮೂಲಕ ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Leave A Reply

Your email address will not be published.