ಇನ್ನು ಮುಂದೆ ಪ್ರಾಣಿ ವಧೆಗೆ ಸ್ಟನ್ನಿಂಗ್ ಕಡ್ಡಾಯ-ಪಶುಸಂಗೋಪನಾ ಇಲಾಖೆಯಿಂದ ಮಹತ್ವದ ಆದೇಶ|ಕೋಳಿ, ಕುರಿ ಅಂಗಡಿಗಳಲ್ಲಿ ಸ್ಟನ್ನಿಂಗ್ ಫೆಸಿಲಿಟಿ ಇಲ್ಲದಿದ್ದರೆ ನೋ ಲೈಸೆನ್ಸ್
ಬೆಂಗಳೂರು: ಪ್ರಾಣಿಗಳಿಗೆ ಹಿಂಸೆ ನೀಡದೆ ವಧೆ ಮಾಡುವ ದೃಷ್ಟಿಯಿಂದ,ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿಚಾರದ ನಡುವೆ ಪಶು ಸಂಗೋಪನಾ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಇನ್ನು ಮುಂದೆ ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಹಿಂಸೆ ನೀಡಬಾರದು ಎಂದು ಸೂಚನೆ ನೀಡಲಾಗಿದ್ದು,ಹಿಂಸೆ ನೀಡದೆ ಪ್ರಾಣಿಗಳನ್ನು ವಧೆ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಇನ್ನುಮುಂದೆ ಪ್ರಾಣಿ ವಧೆಗೆ ಸ್ಟನ್ನಿಂಗ್ ಕಡ್ಡಾಯವಾಗಿ ಇರಲಿದೆ ಎಂದು ಪಶುಸಂಗೋಪನಾ ಇಲಾಖೆ ತಿಳಿಸಿದ್ದು,ಕೋಳಿ, ಕುರಿ ಅಂಗಡಿಗಳಿಗೆ ಪಶುಸಂಗೋಪನಾ ಇಲಾಖೆ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ.
ಸ್ಟನ್ನಿಂಗ್ ಎಂದರೆ, ಪ್ರಾಣಿಗಳನ್ನು ವಧೆ ಮಾಡುವ ಮೊದಲು ಪ್ರಜ್ಞೆ ತಪ್ಪಿಸುವ ವಿಧಾನ ಆಗಿದೆ. ಪ್ರಜ್ಞೆ ತಪ್ಪಿಸುವುದರಿಂದ ಪ್ರಾಣಿಗಳನ್ನು ಸಾಯಿಸುವಾಗ ಅವುಗಳಿಗೆ ನೋವು ತಿಳಿಯುವುದಿಲ್ಲ. ಯಾವುದೇ ಅಂಗಡಿಗಳಲ್ಲಿ ಇದನ್ನು ಪಾಲನೆ ಮಾಡದ ಹಿನ್ನೆಲೆ, ಅನೇಕ ದೂರುಗಳು ಪಶು ಸಂಗೋಪನಾ ಇಲಾಖೆಗೆ ಬಂದ ಕಾರಣ ಈಗ ಈ ಆದೇಶ ಹೊರಡಿಸಲಾಗಿದೆ ಎಂದು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಉಮಾಪತಿ ತಿಳಿಸಿದ್ದಾರೆ. ಪ್ರಾಣಿಗಳಿಗೆ ಹಿಂಸೆ ನೀಡಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮೀರಿದರೆ 50 ಸಾವಿರದಿಂದ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
ಸ್ಟನ್ನಿಂಗ್ ಮೆಥಡ್ನಿಂದ ಪ್ರಾಣಿಗಳು ನರಳಾಟದಿಂದ ಸಾಯೋದಿಲ್ಲ. ಸ್ಟನ್ನಿಂಗ್ ವೇಳೆ ಪ್ರಾಣಿಗಳ ತಲೆಗೆ ಜೋರಾಗಿ ಹೊಡೆಯಲಾಗುತ್ತದೆ. ಆಗ ಪ್ರಾಣಿಗಳ ತಲೆಗೆ ಪೆಟ್ಟು ಬಿದ್ದು ಅವುಗಳ ಮೆದುಳು ನಿಷ್ಕ್ರಿಯಗೊಳ್ಳುತ್ತದೆ. ಆ ವೇಳೆ ಪ್ರಾಣಿಗಳನ್ನು ವಧೆ ಮಾಡಲಾಗುತ್ತದೆ. ಹೀಗೆ, ಇನ್ನು ಮುಂದೆ ಕೋಳಿ, ಕುರಿ ಅಂಗಡಿಗಳಿಗೆ ಲೈಸೆನ್ಸ್ ಕೊಡುವಾಗಲೂ ಸ್ಟನ್ನಿಂಗ್ ಫೆಸಿಲಿಟಿ ಕಡ್ಡಾಯ ಆಗಿ ಇರಲೇಬೇಕು.ಸ್ಟನ್ನಿಂಗ್ ಫೆಸಿಲಿಟಿ ಇಲ್ಲದೆ ಹೋದರೆ ಪರವಾನಗಿ ನೀಡಬಾರದು. 2001 ರ ಸೆಕ್ಷನ್ 6 ಮತ್ತು 4 ರ ಅಡಿಯಲ್ಲಿ ಸ್ಟನ್ನಿಂಗ್ ನಿಯಮ ಇದ್ದು,ನಿಯಮ ಬ್ರೇಕ್ ಮಾಡುವವರಿಗೆ 1960 ಆಕ್ಟ್ ಪ್ರಕಾರ 5 ಸಾವಿರದಿಂದ 50 ಸಾವಿರದವರೆಗೂ ದಂಡ ವಿಧಿಸಲಾಗುವುದು ಎಂದು ಸೂಚನೆ ಕೊಡಲಾಗಿದೆ. ಆಕ್ಟ್ ಅಡಿಯಲ್ಲಿ ಪ್ರಾಣಿ ಹಿಂಸೆಯ ಕೇಸ್ ಕೂಡಾ ದಾಖಲು ಮಾಡಲಾಗುವುದು ಎಂದು ಹೇಳಲಾಗಿದೆ.