ಹಣ್ಣುಗಳ ರಾಜ ಮಾವಿನಹಣ್ಣು ಈ ಬಾರಿ ಮಾರುಕಟ್ಟೆಗೆ ಲಗ್ಗೆ ಇಡಲು ಸ್ವಲ್ಪ ಹೆಚ್ಚೇ ದಿನ ತಗೊಳ್ತಾ ಇದೆ. ಬಿಸಿಲಿನ ಬೇಗೆಯಲ್ಲಿ ತಂಪು ನೀಡುವ ಹಣ್ಣುಗಳ ಪೈಕಿ ಮಾವಿನ ಹಣ್ಣಿಗೆ ಅದರದ್ದೇ ಆದ ಸ್ಥಾನವಿದೆ. ಆದರೆ ಈ ಬಾರಿ ಮಾವಿನ ಹಣ್ಣನ್ನು ಸವಿಯೋಕೆ ಒಂದಿಷ್ಟು ಸಮಯ ಕಾಯಲೇ ಬೇಕು. ಹೌದು ಹವಾಮಾನ ವೈಪರೀತ್ಯದಿಂದ ಮಾವು ಹಣ್ಣಿನ ಮಾರುಕಟ್ಟೆಗೆ ಕಾಲಿಡೋಕೆ ವಿಳಂಬವಾಗಿದೆ.ಇದರ ಜೊತೆಗೆ ದರ ಕೂಡ ಜನರ ಜೇಬು ಸುಡೋದರಲ್ಲಿ ಗ್ಯಾರಂಟಿ. ಪ್ರತಿ ವರ್ಷ ಮಾರ್ಚ್ ಕೊನೆಯ ವಾರದ ಹೊತ್ತಿಗೆ ಅಂದ್ರೆ ಹತ್ತಿರ ಹತ್ತಿರ ಯುಗಾದಿ ಮಾವಿನ ಹಣ್ಣು ಮಾರುಕಟ್ಟೆಗೆ ಬರೋದು ಕ್ರಮ. ಆದರೆ ಈ ಬಾರಿ ನವೆಂಬರ್ ನಲ್ಲಿ ಸುರಿದ ಭಾರೀ ಮಳೆ ಮಾವಿನ ಫಸಲಿಗೆ ಅಡ್ಡಿ ಉಂಟುಮಾಡಿದೆ.
ಆದರೆ ಎಪ್ರಿಲ್ ಮೊದಲ ವಾರ ಸಮೀಪಿಸಿದ್ದರೂ ಇನ್ನೂ ಮಾವಿನ ಫಸಲು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿಲ್ಲ. ಅಲ್ಲಲ್ಲಿ ಮಾವಿನ ಹಣ್ಣಿನ ಮಾರಾಟ ಪ್ರಾರಂಭವಾಗಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಮಾವು ಮಾರುಕಟ್ಟೆಗೆ ಬಂದಿಲ್ಲ. ಮಾತ್ರವಲ್ಲ ಈ ಭಾರಿ ಮಾವಿನ ಫಸಲು ಕೂಡ ಕಡಿಮೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಈ ವರ್ಷ ಕೇವಲ 40 ರಿಂದ 50 ರಷ್ಟು ಮಾತ್ರ ಮಾವು ಇಳುವರಿ ಬರಬಹುದು ಎಂದು ಮಾವು ನಿಗಮದ ತಾಂತ್ರಿಕ ಸಮಿತಿ ಅಂದಾಜಿಸಿದೆ.
ಮೇ ವೇಳೆಗೆ ಮಾವಿನ ಹಣ್ಣು ಮಾರುಕಟ್ಟೆಗೆ ಬರಲಿದೆ ಎಂದು ನೀರಿಕ್ಷೆ ಮಾಡಲಾಗುತ್ತಿದೆ. ಇನ್ನೊಂದೆಡೆ ಮಾವಿನ ಫಸಲು ಕಡಿಮೆ ಆಗಿರೋದರಿಂದ ಸಹಜವಾಗಿ ಬೆಲೆ ಕೂಡ ಏರಿಕೆಯಾಗುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಗ್ರಾಹಕರ ಜೇಬು ಈ ಬಾರಿ ಸುಡುವುದು ಖಂಡಿತ.