ಹೊಸತೊಡಕು ದಿನ ಜಟ್ಕಾಮಾಂಸ ದೊರಕುವಂತೆ ಸರಕಾರ ಕ್ರಮ ಕೈಗೊಳ್ಳಲು ಆಗ್ರಹ
ಹಿಂದೂಗಳ ಧಾರ್ಮಿಕ ಹಕ್ಕುಗಳನ್ನು ಗಮನದಲ್ಲಿರಿಸಿಕೊಂಡು ಹಲಾಲ್ ಮಾಂಸವನ್ನು ನಿಷೇಧಿಸಿ, ಯುಗಾದಿ ಹಬ್ಬದ ಮರುದಿನ “ಹೊಸತೊಡಕು’ ದಿನ ಜಟ್ಕಾ ಮಾಂಸ ಲಭ್ಯವಾಗುವಂತೆ ರಾಜ್ಯ ಸರಕಾರ ವ್ಯವಸ್ಥೆ ಮಾಡುವಂತೆ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟವು ಆಗ್ರಹಿಸಿದೆ.
ಹಲಾಲ್ ಮೂಲಕ ಮಾಂಸವನ್ನು ಅಲ್ಲಾಹುಗೆ ಅರ್ಪಣೆ ಮಾಡುವ ಕಾರಣ ಅದು ಎಂಜಲು ಆಗುತ್ತಿದ್ದು, ಅದನ್ನು ಪುನಃ ಹಿಂದೂ ದೇವರಿಗೆ ಅರ್ಪಿಸುವುದು ಧರ್ಮಕ್ಕೆ ವಿರುದ್ದವಾಗಿದೆ ಎಂದು ತಿಳಿಸಿದೆ.
ರಾಜ್ಯದಲ್ಲಿ ಹಲಾಲ್ ಉತ್ಪನ್ನಗಳನ್ನು ನಿಷೇಧಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಹಲಾಲ್ ಪ್ರಮಾಣಪತ್ರದ ಮೂಲಕ ದೇಶದ ಅರ್ಥವ್ಯವಸ್ಥೆಗೆ ಸಮನಾಂತರವಾಗಿ ಪ್ರತ್ಯೇಕ ಇಸ್ಲಾಮಿಕ್ ಅರ್ಥವ್ಯವಸ್ಥೆಯನ್ನು ನಿರ್ಮಾಣ ಮಾಡುವ ಸಂಚನ್ನು ಇಸ್ಲಾಮಿಕ್ ಸಂಘಟನೆಗಳು ಮಾಡುತ್ತಿವೆ. ಹಲಾಲ್ ಮೂಲಕ ದೇಶದ ಆರ್ಥಿಕ ವ್ಯವಹಾರದ ಮೇಲೆ ಹಿಡಿತ ಸಾಧಿಸಲು ಮಾಡಿದ ಸಂಚಾಗಿದೆ. ದೇಶದ ಭದ್ರತೆ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ದೇಶದಲ್ಲಿ ಆಹಾರದ ಉತ್ಪನ್ನಗಳ ಬಗ್ಗೆ ಪ್ರಮಾಣಪತ್ರಗಳನ್ನು ನೀಡಲು ಎಫ್ಎಸ್‌ಎಸ್‌ಎಐ ಮತ್ತು ಎಫ್ಡಿಎಯಂತಹ ಅಧಿಕೃತ ಸರಕಾರಿ ಸಂಸ್ಥೆಗಳು ಇರುವಾಗ ಹಣ ಪಡೆದು ಇಸ್ಲಾಮಿಕ್ ಪದ್ಧತಿಯ ಪ್ರಮಾಣಪತ್ರಗಳನ್ನು ನೀಡುವುದು ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ. ದೇಶದ ಬಹುಸಂಖ್ಯಾಕ ಹಿಂದೂ ಉದ್ಯಮಿಗಳಿಗೆ ವಂಶಪಾರಂಪರ್ಯವಾಗಿ ಮಾಂಸದ ವ್ಯಾಪಾರ ಮಾಡಿಕೊಂಡು ಬರುತ್ತಿರುವ ಹಿಂದೂ ಸಮುದಾಯಕ್ಕೆ ಅನ್ಯಾಯವಾಗಿದೆ. ಆದ್ದರಿಂದ ಹಲಾಲ್ ಪ್ರಮಾಣಪತ್ರವನ್ನು ಕೂಡಲೇ ನಿಷೇಧ ಮಾಡಬೇಕು ಎಂದು ಆಗ್ರಹಿಸಿದೆ.