ರಣಾಂಗಣವಾದ ಪ್ರಸಿದ್ಧ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಆವರಣ !! | ಕರ್ನಾಟಕದ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ, 200 ಕ್ಕೂ ಹೆಚ್ಚು ವಾಹನಗಳ ಗಾಜು ಪುಡಿ ಪುಡಿ
ಪ್ರಶಾಂತವಾಗಿದ್ದ ದೇವಸ್ಥಾನದ ಆವರಣ ಇದ್ದಕ್ಕಿದ್ದಂತೆಯೇ ರಣಾಂಗಣವಾಗಿ ಬದಲಾದ ಘಟನೆ ಆಂಧ್ರದ ಪ್ರಸಿದ್ಧ ದೇವಾಲಯದಲ್ಲಿ ನಡೆದಿದೆ. ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಕರ್ನಾಟಕದ ಭಕ್ತರ ಮೇಲೆ ಹಲ್ಲೆ ಆಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕರ್ನಾಟಕ ಮೂಲದ ಕೆಲವು ಭಕ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ಘಟನೆಯಲ್ಲಿ ಕರ್ನಾಟಕದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಜಾನಮಟ್ಟಿ ಗ್ರಾಮದ ಶ್ರೀಶೈಲ ವಾರಿಮಠ (28) ಮೃತ ಯುವಕ. ಮಾರಾಮಾರಿಯಲ್ಲಿ ಈತನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ಗಂಭೀರ ಗಾಯಗೊಂಡಿದ್ದ ಯುವಕ ಇದೀಗ ಸಾವಿಗೀಡಾಗಿದ್ದಾನೆ.
ನೀರಿನ ಬಾಟಲಿ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಜಗಳ ಆರಂಭವಾಗಿದೆ. ಆಂಧ್ರ ಮೂಲದ ವ್ಯಾಪಾರಸ್ಥರು ಹಾಗೂ ಸ್ಥಳೀಯರಿಂದ ಕರ್ನಾಟಕ ಭಕ್ತರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಗಲಾಟೆಯಲ್ಲಿ ಕರ್ನಾಟಕ ಮೂಲದ ಇನ್ನೂರು ವಾಹನಗಳ ಗಾಜುಗಳನ್ನು ಪುಡಿ ಮಾಡಲಾಗಿದೆ ಎನ್ನಲಾಗಿದೆ. ಬೆಳಗಾವಿ ಮೂಲದ ಭಕ್ತರಿಗೆ ಗಾಯಗಳಾಗಿವೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾಠಿ ಹಾಗೂ ಮಾರಕಾಸ್ತ್ರ ಹಿಡಿದು ಹೊಡೆದಾಡುತ್ತಿರುವ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಪಾದಯಾತ್ರೆ ಮಾಡಿದ್ದರು. ರಾತ್ರಿ ವೇಳೆ ಕ್ಷುಲ್ಲಕ ಕಾರಣಕ್ಕೆ ಭಕ್ತರು ಹಾಗೂ ವ್ಯಾಪಾರಿಗಳ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿ ಸ್ಥಳೀಯರಿಂದ ಭಕ್ತರ ಜೊತೆ ಹೊಡೆದಾಟವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆದಿದೆ. ಉದ್ವಿಗ್ನ ಸ್ಥಿತಿಯ ಕಾರಣ, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, 144 ಸೆಕ್ಷನ್ ಹಾಕಲಾಗಿದೆ.