ರಂಝಾನ್ ತಿಂಗಳಲ್ಲಿ ಹಿಂದೂಗಳ ವ್ಯಾಪಾರಕ್ಕೆ ಅಡ್ಡಿ ಮಾಡಬೇಡಿ, ಅವಕಾಶ,ಪ್ರೋತ್ಸಾಹ ನೀಡುವಂತೆ ಮುಸ್ಲಿಂ ಧಾರ್ಮಿಕ ಮುಖಂಡರ ಸುತ್ತೋಲೆ
ಬೆಂಗಳೂರು: ಪವಿತ್ರ ರಂಜಾನ್ ತಿಂಗಳಲ್ಲಿ ಹಿಂದೂ ವ್ಯಾಪಾರಿಗಳ ವ್ಯಾಪಾರಕ್ಕೆ ಯಾವುದೇ ಮುಸಲ್ಮಾನರು ಅಡ್ಡಿ ಪಡಿಸದೇ ಅವರಿಗೆ ವ್ಯಾಪಾರ ಮಾಡಲು ಅವಕಾಶ ಕೊಡುವಂತೆ ಮುಸ್ಲಿಂ ಮಸೀದಿಗಳ ಧಾರ್ಮಿಕ ಮುಖಂಡರು ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಮುಸ್ಲಿಮರಿಗೆ ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವ್ಯಾಪಾರ ನಿರಾಕರಿಸುವಂತೆ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವುದರ ನಡುವೆಯೇ ಮುಸ್ಲಿಮ್ ಧಾರ್ಮಿಕ ಮುಖಂಡರು ಸೌಹಾರ್ದದ ಸಂದೇಶವನ್ನು ನೀಡಿದ್ದು, ಹಿಂದೂಗಳೊಂದಿಗೆ ವ್ಯಾಪಾರ ಮಾಡುವಂತೆ ಮುಸ್ಲಿಮರಿಗೆ ಪ್ರೋತ್ಸಾಹಿಸಿದ್ದಾರೆ.
ಪವಿತ್ರ ರಂಜಾನ್ ತಿಂಗಳಲ್ಲಿ ಮಸೀದಿಗಳ ವ್ಯಾಪ್ತಿಯಲ್ಲಿ ನೂರಾರು ಹಿಂದೂ ಬಾಂಧವರು ಹಣ್ಣು-ಬಟ್ಟೆ ಸೇರಿದಂತೆ ವಿವಿಧ ರೀತಿಯ ವ್ಯಾಪಾರಗಳನ್ನು ಮಾಡುತ್ತಾರೆ. ಅವರ ವ್ಯಾಪಾರಕ್ಕೆ ಯಾವುದೇ ಧಕ್ಕೆ ತರುವಂತೆ ಯಾರೂ ವರ್ತಿಸಬಾರದು. ಅವರಿಗೆ ವ್ಯಾಪಾರಕ್ಕೆ ಅವಕಾಶ ಮತ್ತು ಸಹಕಾರ ನೀಡಬೇಕು ಎಂದು ಜಾಮೀಯಾ ಮಸೀದಿಯ ಮುಖ್ಯ ಧಾರ್ಮಿಕ ಗುರುಗಳಾದ ಮೌಲಾನಾ ಡಾ.ಮಸೂದ್ ಇಮ್ರಾನ್ ಸುತ್ತೋಲೆ ಹೊರಡಿಸಿದ್ದಾರೆ.