ಮಹಿಳೆಯರೇ ಎಚ್ಚರ |ತೆಂಗಿನಕಾಯಿ ಕೀಳೋಕೆ ಬಂದವನು ಮಾಡಿದ ಖತರ್ನಾಕ್ ಕೆಲಸ | ವೃದ್ಧೆ ಮಹಿಳೆಯ ಕುತ್ತಿಗೆಗೆ ಮಚ್ಚಿನಿಂದ ಹಲ್ಲೆ ಮಾಡಿ 60 ಗ್ರಾಂ ಚಿನ್ನದ ಸರ ಕಿತ್ತು ಪರಾರಿ |
ಅಪರಿಚಿತರನ್ನು ಯಾರೂ ಕೂಡಾ ಮನೆಗೆ ಬರಲು ಬಿಡುವುದಿಲ್ಲ. ಆದರೆ ಕೆಲವರು ನಂಬಿಕೆ ದ್ರೋಹ ಮಾಡಿ ವಿಶ್ವಾಸ ಸಂಪಾದನೆ ಮಾಡಿ ಅನಂತರ ಮಾಡುವ ಕೃತ್ಯಗಳಿಗೆ ಈ ಘಟನೆಯೇ ನಿದರ್ಶನ. ಹಾಗಾಗಿ ಮಹಿಳೆಯರೇ ಎಚ್ಚರ.
ತಮಿಳುನಾಡು ಮೂಲದ ಕೃಷ್ಣಗಿರಿ ಮೂಲದ ಸಭಾಪತಿ ಬಂಧಿತ ವ್ಯಕ್ತಿ.
ಘಟನೆ ವಿವರ : ಈತ ಕಳೆದ ಹತ್ತು ವರ್ಷಗಳಿಂದ ಬೆಂಗಳೂರು ನಗರದಲ್ಲಿ ವಾಸವಾಗಿದ್ದ. ಗಾರೆಕೆಲಸ, ತೆಂಗಿನಕಾಯಿ ಕೀಳುವುದು ಸೇರಿದಂತೆ ಇನ್ನಿತರ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮಲ್ಲೇಶ್ವರಂ ನಿವಾಸಿಯಾದ ವೃದ್ಧೆಯೊಬ್ಬರು ನಳಿನಾ ನಾಗರಾಜ್ ಗೆ ಆರೋಪಿಯ ಪರಿಚಯವಾಗಿತ್ತು. ವೃದ್ಧೆಯ ಮನೆಯ ಆವರಣದಲ್ಲಿ ಮೂರು ತಿಂಗಳ ಹಿಂದೆ ತೆಂಗಿನ ಕಾಯಿ ಕಿತ್ತುಕೊಟ್ಟಿದ್ದ. ಈ ಮೂಲಕ ವೃದ್ದೆಯ ವಿಶ್ವಾಸಗಳಿಸಿದ್ದ. ಹಾಗಾಗಿ ಮಾರ್ಚ್ 7 ರಂದು ತೆಂಗಿನಕಾಯಿ ಕೀಳೋದಕ್ಕೆ ವೃದ್ಧೆ ಮನೆಗೆ ಕರೆದಿದ್ದರು.
ಅದರಂತೆ ಮನೆಗೆ ಬಂದ ಆರೋಪಿಯು ಮನೆಯಲ್ಲಿ ವೃದ್ಧೆ ಹೊರತುಪಡಿಸಿ ಯಾರು ಇಲ್ಲದಿರುವುದನ್ನು ಗಮನಿಸಿದ್ದಾನೆ. ಮೈ ತುಂಬಾ ಸಾಲ ಮಾಡಿ ತತ್ತರಿಸಿದ್ದ ಸಭಾಪತಿ ಆಕೆಯ ಮೈಮೇಲಿದ್ದ ಚಿನ್ನದ ಸರ ಮೇಲೆ ಕಣ್ಣು ಹಾಕಿದ್ದ. ಈ ವೇಳೆ ಕೈಯಲ್ಲಿದ್ದ ತೆಂಗಿನ ಕಾಯಿ ಕತ್ತರಿಸುವ ಮಚ್ಚಿನಿಂದ ವೃದ್ಧೆಯ ಕತ್ತಿನ ಭಾಗದ ಮೇಲೆ ಹಲ್ಲೆ ನಡೆಸಿದ್ದಾನೆ. 60 ಗ್ರಾಂ ಚಿನ್ನದ ಸರವನ್ನ ಎಗರಿಸಿ ಪರಾರಿಯಾಗಿದ್ದ. ಮೊಬೈಲ್ ಸ್ವಿಚ್ ಅಫ್ ಮಾಡಿಕೊಂಡು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ.
ವೃದ್ಧೆಯ ಮನೆಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಮಲ್ಲೇಶ್ವರಂ ಇನ್‌ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ಸಿಸಿಟಿವಿ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.