ಚಿಕಿತ್ಸೆಗೆ ನೆರವಾಗುವ ನೆಪದಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನ !! | ಮತಾಂತರ ತಡೆದ ಕಾಂಗ್ರೆಸ್ ಶಾಸಕರ ಮುಂದಾಳತ್ವದ ಖಾಸಗಿ ಆಸ್ಪತ್ರೆ
ಅನಾರೋಗ್ಯಕ್ಕೆ ತುತ್ತಾಗಿದ್ದ ಕುಟುಂಬದ ಮಗುವೊಂದರ ಚಿಕಿತ್ಸೆಗೆ ನೆರವಾಗುವ ನೆಪದಲ್ಲಿ ಇಡೀ ಹಿಂದೂ ಕುಟುಂಬವನ್ನೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸಿರುವ ಘಟನೆ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.
ಅಪರೂಪದ ಕಾಯಿಲೆಯಾಗಿರುವ ಥಲಸ್ಸಿಮಿಯಾದಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಹಿಂದೂ ಧರ್ಮ ತೊರೆದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ್ದ ಬಡ ಕುಟುಂಬವೊಂದಕ್ಕೆ ಬಿಎಲ್‌ಡಿಇ ಆಸ್ಪತ್ರೆ ನೆರವಿನ ಹಸ್ತ ಚಾಚಿದೆ.
ಬಸವನ ಬಾಗೇವಾಡಿಯ ನಿವಾಸಿ ಈರಣ್ಣ (34) ಅವರು ಡಾಬಾದಲ್ಲಿ ಕೆಲಸ ಮಾಡಿಕೊಂಡಿದ್ದು, ತೀವ್ರ ಬಡತನ ಹಿನ್ನೆಲೆಯಲ್ಲಿ ತಮ್ಮ ಮಗನಿಗೆ ಎದುರಾಗಿರುವ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಈಗಾಗಲೇ ಚಿಕಿತ್ಸೆಗಾಗಿ ಹಲವು ರಾಜ್ಯ ಸುತ್ತಿರುವ ಈರಣ್ಣ ಅವರು ರೂ.3 ಲಕ್ಷ ಖರ್ಚು ಮಾಡಿದ್ದಾರೆ.
ಈ ನಡುವೆ ತಮಿಳುನಾಡಿನ ವೆಲ್ಲೂರಿನಲ್ಲಿರುವ ಆಸ್ಪತ್ರೆಯೊಂದು ಕುಟುಂಬವು ಕನಿಷ್ಠ ಎರಡು ತಿಂಗಳ ಕಾಲ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುವುದು ಸೇರಿದಂತೆ ಕೆಲವು ಷರತ್ತುಗಳ ಮೇಲೆ ಅವರಿಗೆ ಸಹಾಯ ಮಾಡುವ ಭರವಸೆ ನೀಡಿದ್ದು, ಮಗುವಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಈ ಕುಟುಂಬ ಮತಾಂತರಗೊಳ್ಳಲು ನಿರ್ಧರಿಸಿತ್ತು ಎಂದು ವರದಿಗಳು ತಿಳಿಸಿವೆ.
ಈ ಬಗ್ಗೆ ಮಾತನಾಡಿರುವ ಈರಣ್ಣ ಅವರು, ನನ್ನ ಮಗನ ಚಿಕಿತ್ಸೆಗಾಗಿ ಹಣಕಾಸಿನ ನೆರವು ಎಲ್ಲಿಂದಲೂ ಸಿಗಲಿಲ್ಲ. ನನ್ನ ತಿಂಗಳ ವೇತನ ರೂ. 12,000 ಆಗಿದೆ. ಆದರೆ ನನ್ನ ಮಗನ ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು ಅರ್ಧದಷ್ಟು ಗಳಿಕೆಯ ಹಣವನ್ನು ಖರ್ಚು ಮಾಡಲೇಬೇಕಾಗಿದೆ. ವೆಲ್ಲೂರಿಗೆ ಹೋಗಾದ ಅಲ್ಲಿನ ಆಸ್ಪತ್ರೆಯೊಂದು ನನ್ನ ಮಗನ ಮೂಳೆ ಮಜ್ಜೆಯ ಶಸ್ತ್ರಚಿಕಿತ್ಸೆಗೆ 10 ಲಕ್ಷ ರೂ. ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಾಗಿ ಭರವಸೆ ನೀಡಿದರು. ಚರ್ಚ್ ನಲ್ಲಿ ಪ್ರತೀನಿತ್ಯ ಪ್ರಾರ್ಥನೆ ಸಲ್ಲಿಸುವಂತೆ ತಿಳಿಸಿದ್ದರು.
ಧರ್ಮ ಮತಾಂತರ ಕುರಿತಂತೆಯೂ ಮಾತನಾಡಿದ್ದರು. ಮಗನಿಗೆ ಚಿಕಿತ್ಸೆ ನೀಡುವುದಾಗಿ ಹೇಳಿದ್ದರಿಂದ ಧರ್ಮದಿಂದ ಮತಾಂತರಗೊಳ್ಳಲು ನಿರ್ಧರಿಸಿದ್ದೆ. ನನಗೆ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೂವರು ಮಕ್ಕಳಿದ್ದಾರೆಂದು ಹೇಳಿದ್ದಾರೆ.
ಈ ನಡುವೆ ಬಿಎಲ್‌ಡಿಇ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಅವರು, ಕುಟುಂಬದ ಸಂಕಷ್ಟದ ಬಗ್ಗೆ ತಿಳಿದು ಉಚಿತವಾಗಿ ಚಿಕಿತ್ಸೆ ನೀಡುವಂತೆ ಬಿಎಲ್‌ಡಿಇ ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನೆರವಿನ ಭರವಸೆ ಸಿಕ್ಕ ಹಿನ್ನಲೆಯಲ್ಲಿ ಇದೀಗ ಕುಟುಂಬವು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವ ನಿರ್ಧಾರದಿಂದ ಹಿಂದೆ ಸರಿದಿದೆ.