ಬೆಳ್ತಂಗಡಿ: ನೇತ್ರಾವತಿ ಸ್ನಾನಘಟ್ಟದಲ್ಲಿ ನಗ-ನಗದು ಕಳ್ಳತನ ಮಾಡಿದ್ದ ಅಂತರ್ ರಾಜ್ಯ ಕಳ್ಳ ಧರ್ಮಸ್ಥಳ ಪೊಲೀಸರ ಬಲೆಗೆ | ದೇಶದ ಪವಿತ್ರ ಯಾತ್ರಾ ಸ್ಥಳಗಳೇ ಈತನ ಪ್ರಮುಖ ಟಾರ್ಗೆಟ್ !!

ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ ಯಾತ್ರಿಕರು ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ನಾನ ಮಾಡಲು ಬ್ಯಾಗ್ ಇಟ್ಟಾಗ ಅದರಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ಕಳ್ಳತನ ಮಾಡಿದ್ದ ಅಂತರ್ ರಾಜ್ಯ ಕಳ್ಳನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಶ್ರೀಧರ ನಾಯರಿ ಎಂಬವರು ಸ್ನಾನ ಮಾಡಲು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ತಮ್ಮ ಚಿನ್ನಾಭರಣ ಹಾಗೂ ಹಣ ಇದ್ದ ಬ್ಯಾಗ್ ಇಟ್ಟಿದ್ದರು. ಈ ವೇಳೆ ಅದು ಕಳ್ಳರ ಪಾಲಾಗಿತ್ತು. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದರು.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದ ವೇಳೆ ಕಳ್ಳ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸಾಂಗೋಲಾ ತಾಲೂಕಿನ ಷಾರೆ ಗ್ರಾಮದ ಇಂದಿರಾನಗರದ ನಿವಾಸಿ ಮಿಥುನ್ ಚೌವ್ಹಾಣ್ (31) ಸಿಕ್ಕಿ ಬಿದ್ದಿದ್ದಾನೆ. ಆತನ ಬಳಿಯಿದ್ದ 80,000/- ಮೌಲ್ಯದ 37 ಗ್ರಾಂನ ಚಿನ್ನದ ಓಲೆ, 32,000/- ಮೌಲ್ಯದ 8.04 ಗ್ರಾಂ ನ ಲಕ್ಷ್ಮೀ ಮಾಲೆ, 16,230 ಮೌಲ್ಯದ ಚಿನ್ನದ ಸರ, 40,000/- ಮೌಲ್ಯದ 10.2 ಗ್ರಾಂ ನ ಬ್ರೇಸ್ ಲೈಟ್, 15,000/- ಮೌಲ್ಯದ ಬ್ರೇಸ್ ಲೈಟ್, 8,500/- ಮೌಲ್ಯದ 2.190 ಗ್ರಾಂ ನ ಉಂಗುರವನ್ನು ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 2.4 ಲಕ್ಷ ಎಂದು ತಿಳಿದುಬಂದಿದೆ.

ಆರೋಪಿ ದೇಶದ ವಿವಿಧ ಪ್ರಸಿದ್ಧ ಯಾತ್ರಾ ಸ್ಥಳಗಳಿಂದ ಕಳ್ಳತನ ಮಾಡುವ ಅಭ್ಯಾಸ ಹೊಂದಿದ್ದು, ಈತನ ಮೇಲೆ ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಇದೀಗ ಧರ್ಮಸ್ಥಳ ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ದಕ್ಷಿಣ ಕನ್ನಡ ಪೊಲಿಸ್ ಅಧೀಕ್ಷಕರಾದ ಋಷಿಕೇಶ್ ಸೋನಾವಣೆ ,ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷರು ಬಂಟ್ವಾಳ ಉಪವಿಭಾಗದ ಪ್ರತಾಪ್ ಸಿಂಗ್ ತೋರಟ್ ಮತ್ತು ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಶಿವಕುಮಾರ್ ಅವರ ನೇತ್ರತ್ವದಲ್ಲಿ ಪಿಎಸ್‌ಐ ಕೃಷ್ಣಕಾಂತ್ ಪಾಟೀಲ್ ಅವರ ವಿಶೇಷ ತಂಡದ ಸಿಬ್ಬಂದಿ ಬೆನ್ನಿಚ್ಚನ್ ,ಪ್ರಶಾಂತ್,ರಾಹುಲ್, ಸತೀಶ್ ನಾಯ್,ವಿಜು, ರವೀಂದ್ರ, ಕೃಷ್ಣಪ್ಪ ಹಾಗೂ ಜಿಲ್ಲಾ ಗಣಕ ಯಂತ್ರ ವಿಭಾಗದ ಸಂಪತ್ ಮತ್ತು ದಿವಾಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣ ಭೇದಿಸಿದ ತಂಡಕ್ಕೆ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದು, ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಯ ಸುರಿಮಳೆ ಸುರಿದಿದೆ.

Leave A Reply

Your email address will not be published.