ಈ ಊರಿನ ದೇವರು ‘ಮದ್ಯಪ್ರಿಯ’ನಂತೆ|ಗುಡಿಗೆ ತೆರಳುವಾಗ ಕೈಯಲ್ಲಿ ಸಾರಾಯಿ ಬಾಟಲ್ ಹಿಡಿದೇ ನಡೆಯುತ್ತಾರಂತೆ ಭಕ್ತರು|ಏನಿದು ಇದರ ಹಿಂದಿರುವ ನಂಬಿಕೆ!?
ಬಾಗಲಕೋಟೆ :ಸಾಮಾನ್ಯವಾಗಿ ದೇವಾಲಯಕ್ಕೆ ತೆರಳುವಾಗ ದೇವರಿಗೆ ನೈವೇದ್ಯವಾಗಿ ಹೂ, ಹಣ್ಣು ಕಾಯಿ, ಇತರೆ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೇವೆ.ಆದರೆ ಇಲ್ಲಿನ ಜನ ಸಾರಾಯಿ ಕೈಯಲ್ಲಿ ಹಿಡಿದೇ ದೇವರ ಗುಡಿಗೆ ತೆರಳೋದಂತೆ…
ಈ ಪದ್ಧತಿ ವಿಚಿತ್ರ ಎನಿಸಿದರು ಅಲ್ಲಿನ ದೇವರಿಗೆ ಮಾತ್ರ ಮದ್ಯವೇ ಪ್ರಿಯವಂತೆ.ಇದು ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ಕೆಲವಡಿ ಗ್ರಾಮದ ಲಕ್ಷ್ಮಿ ರಂಗನಾಥ ದೇವಸ್ಥಾನದಲ್ಲಿ ನಡೆಯುತ್ತಿದ್ದು,ಇಲ್ಲಿ ಸಾರಾಯಿ ನೈವೇದ್ಯ ಮಾಡಿದರೆ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ ಎನ್ನುವ ನಂಬಿಕೆ.
ಪ್ರತಿ ವರ್ಷ ಹೋಳಿ ಹುಣ್ಣೆಮೆಯ ಬಳಿಕ ಈ ಊರಲ್ಲಿ ಜಾತ್ರೆ ನಡೆಯುತ್ತದೆ.ಈ ವೇಳೆಯಲ್ಲಿ, ಇಲ್ಲಿನ ಜನತೆ ತಮ್ಮ ಹರಕೆ ತೀರಿಸಲು ದೇವರಿಗೆ ಮದ್ಯದ ನೈವೇದ್ಯ ಸಲ್ಲಿಸಿ, ತೀರ್ಥ ಸೇವನೆ ಮಾಡುವುದನ್ನು ಕಾಣಬಹುದಾಗಿದೆ.ಭಕ್ತರು ತೆಂಗಿನಕಾಯಿ ಕರ್ಪೂರ, ಊದಬತ್ತಿ ಸೇರಿದಂತೆ ಇತರ ಸಹಿ ಪದಾರ್ಥಗಳ ಜತೆಗೆ ಮದ್ಯಪ್ರಿಯ ದೇವರು ಎಂದು, ಸಾರಾಯಿ ಬಾಟಲ್ ಸಹ ತೆಗೆದುಕೊಂಡು ಬಂದು ದೇವರಿಗೆ ನೀಡುತ್ತಾರೆ.
ತಮ್ಮ ಹರಕೆ ಈಡೇರಿದರೆ ರಂಗನಾಥ ಸ್ವಾಮಿ ದೇವರಿಗೆ ಇಂತಿಷ್ಟು ಮದ್ಯದ ಕಾಣಿಕೆ ಸಲ್ಲಿಸುವುದಾಗಿ ಹರಕೆ ಹೊತ್ತವರು ಹೀಗೆ ಮದ್ಯದ ಬಾಟಲಿ ನೀಡುತ್ತಾರೆ.ಇಲ್ಲಿನ ಜನತೆ ಮಾತ್ರ ಮಿಸ್ ಮಾಡದೇ ಈ ದೇವರಿಗೆ ಸಾರಾಯಿ ನೈವೇದ್ಯವನ್ನ ನೀಡುತ್ತಿದ್ದಾರೆ.