ಇನ್ನೆರಡು ದಿನಗಳಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಯೋಗಿ ಆದಿತ್ಯನಾಥ್ | ಈ ಪಟ್ಟಾಭಿಷೇಕ ಮುಹೂರ್ತದ ಕುರಿತು ಕರಾವಳಿಯ ಖ್ಯಾತ ಜ್ಯೋತಿಷಿಯಿಂದ ಭವಿಷ್ಯವಾಣಿ !!
ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಭಾಜಪ ಎರಡನೇ ಬಾರಿಗೆ ಗೆದ್ದು ಬೀಗಿದೆ. ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಅದು ಕೂಡ ಮಾರ್ಚ್ 25 ನೇ ತಾರೀಕಿನ ಸಂಜೆ 4 ಗಂಟೆಗೆ. ಆ ವಿಶೇಷ ಮುಹೂರ್ತದ ಬಗ್ಗೆ ಕರಾವಳಿಯ ಖ್ಯಾತ ಜ್ಯೋತಿಷಿ ನೀಡಿರುವ ಜ್ಯೋತಿಷ್ಯ ವಿಶ್ಲೇಷಣೆ ಇಲ್ಲಿದೆ.
ಮುಖ್ಯಮಂತ್ರಿ ಜವಾಬ್ದಾರಿ ವಹಿಸಿಕೊಳ್ಳುವ ಪದವಿ ಪ್ರಮಾಣ ಸಮಾರಂಭಕ್ಕೆ ಬಹಳ ಪ್ರಾಮುಖ್ಯತೆ ಇದೆ. ಸಾಂವಿಧಾನಿಕವಾಗಿ ಅದರ ಮುಖ್ಯತ್ವವನ್ನು ಹೊಸದಾಗಿ ಹೇಳುವ ಅಗತ್ಯ ಏನಿಲ್ಲ. ಆದರೆ ಜ್ಯೋತಿಷ್ಯ ಪ್ರಕಾರ ಕೂಡ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅದರದ್ದೇ ಆದ ಮಹತ್ವ ಇದೆ. ಪ್ರಮಾಣವಚನ ದಿನದ ಮುಹೂರ್ತದ ಕುರಿತು ಉಡುಪಿ ಜಿಲ್ಲೆ ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ ಅವರು ವಿಶ್ಲೇಷಣೆಯೊಂದನ್ನು ಮಾಡಿದ್ದು, ಡಿಜಿಟಲ್ ಓದುಗರಿಗಾಗಿ ನೀಡಿರುವ ಮಾಹಿತಿಯನ್ನು ಇಲ್ಲಿ ನೀಡಿದ್ದಾರೆ. ಅದನ್ನು ಅವರದೇ ಪದಗಳಲ್ಲಿ ಇಲ್ಲಿ ನೀಡಲಾಗುತ್ತಿದೆ.
ಊರ್ಧ್ವಮುಖ ರಾಶಿ ಸಿಂಹ ಲಗ್ನದಲ್ಲಿ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ನಡೆಯಲಿದೆ. ಮೇಲ್ನೋಟಕ್ಕೆ ಹನ್ನೊಂದನೆ ಮನೆಯ (ಕಿರೀಟ ಸ್ಥಾನ, ರಾಜ್ಯಾಭಿಷೇಕಕ್ಕೆ ಈ ಸ್ಥಾನ ಶುದ್ಧ ಇರಬೇಕು)ಅಧಿಪತಿ ಬುಧ ಮತ್ತು ಲಗ್ನಾಧಿಪತಿ ರವಿ ಅಷ್ಟಮ ರಂಧ್ರ ಸ್ಥಾನದಲ್ಲಿದ್ದಾರೆ. ಅಂದರೆ ರಂಧ್ರ ಕೊರೆಯುವವರು ಇದ್ದಾರೆ ಎಂದರ್ಥ. ಏಕಾದಶಕ್ಕೆ ಗುರು ದೃಷ್ಟಿ ಇರುವುದರಿಂದ ಆ ಸಮಸ್ಯೆ ನಿವಾರಣೆ ಇದೆ. ಆದರೆ ಆರನೇ ಮನೆಯಾದ ಮಕರದಲ್ಲಿ ಇರುವ ಗ್ರಹ ಯುದ್ಧ ಸ್ಥಿತಿಯನ್ನು ಸೂಚಿಸುತ್ತಿದೆ. ಇದು ಶತ್ರು ಸ್ಥಾನ. ಶತ್ರು ಸ್ಥಾನಾಧಿಪತಿ ಮೂರನೆಯ ಪೂರ್ಣ ದೃಷ್ಟಿ (ಕೆಟ್ಟ ದೃಷ್ಟಿ) ಯಲ್ಲಿ ಲಾಭಾಧಿಪತಿ, ಲಗ್ನಾಧಿಪತಿಯ ವೀಕ್ಷಣೆ ಮಾಡುತ್ತಿದೆ. ಹೇಗೆ ವೀಕ್ಷಿಸುತ್ತಿದೆ ಅಂದರೆ ಶತ್ರುಗಳು ಪರಸ್ಪರ ಹೊಡೆದುಕೊಂಡು ನೋಡುತ್ತಾರೆ. ಎಣ್ಣೆ- ಶೀಗೆಯಂತಿರುವ ಶತ್ರುಗಳು ಒಮ್ಮೊಮ್ಮೆ ಒಟ್ಟಾಗುತ್ತಾರೆ. ಅಲ್ಲಿ ಕುಜನೂ ಬಲಿಷ್ಟ, ಶನಿಯೂ ಬಲಿಷ್ಟ, ಶುಕ್ರನೂ ಬಲಿಷ್ಟನೆ.
ಅಷ್ಟಮದಲ್ಲಿ ನಿಪುಣ ಯೋಗ. ಅಂದರೆ ನಿಶ್ಚಿತವಾಗಿ ಪ್ರಜೆಗಳಿಂದ ಪ್ರಶಂಸಿಸಲ್ಪಡುತ್ತಾರೆ. ಒಂದು ತರ್ಕ ಇದೆ. ಪ್ರಶಂಸೆ ಪಡೆಯಬೇಕಾದರೆ ಸಂಗ್ರಾಮ ನಡೆಯಬೇಕು, ಆ ಸಂಗ್ರಾಮದಲ್ಲಿ ಗೆಲುವು ಬರಬೇಕು. ಅದು ನಡೆಯಲಿದೆ. ಕಾನೂನು ಸುವ್ಯವಸ್ಥೆ ಹದಗೆಡುವಂಥ ಸನ್ನಿವೇಶ ಹೆಚ್ಚಾಗಲಿದೆ. ಅದೂ ಮೊದಲ ಕೆಲ ತಿಂಗಳಲ್ಲಿ ಎನ್ ಕೌಂಟರ್ ಮೂಲಕ ಅಪರಾಧಿಗಳು ಹತರೂ ಆಗುತ್ತಾರೆ. ಪದವಿ ಪ್ರಮಾಣ ಸಮಯಕ್ಕೆ ಮೂಲಾ ನಕ್ಷತ್ರ, ಅಷ್ಟಮಿ ಇದೆ. ದುರ್ಗಾಶಕ್ತಿ ಯೋಗಿಗೆ ಒದಗಲಿದೆ. ಸ್ವಾಭಿಮಾನ, ಹಠ ಈ ಸರ್ಕಾರಕ್ಕೆ ಬರಲಿದೆ. ಕರ್ಮಸ್ಥಾನದಲ್ಲಿ ಉಚ್ಚ ರಾಹು ಇದೆ. ಅತ್ಯಂತ ಪ್ರಾಮಾಣಿಕ ಆಡಳಿತವೂ ಸಿಗಲಿದೆ. ಇಬ್ಬರು ಸ್ತ್ರೀಯರು (ಒಂದು ಮೇಲ್ನೋಟಕ್ಕೆ ಸಾತ್ವಿಕ, ಇನ್ನೊಂದು ಆನೆಯಂತಿರುವ ಬಲಾಡೈ) ಇವರು ಯಾರ್ಯಾರನ್ನೋ ಎತ್ತಿ ಹಿಡಿದು ಸರ್ಕಾರವನ್ನು ವಿಫಲಗೊಳಿಸಲು ಪ್ರಯತ್ನ ಮಾಡಬಹುದು.
ಅದೆಲ್ಲ ಏನೇ ನಡೆದರೂ ಲಗ್ನದ ಅಷ್ಟಮಾಧಿಪತಿ ಗುರು (ರುದ್ರ) ದೃಷ್ಟಿ ಲಗ್ನಕ್ಕಿದೆ. ಅಲ್ಲದೆ ಗುರು ಪಂಚಮಾಧಿಪತಿಯೂ ಹೌದು. ಅಷ್ಟಮ ಗುರುವು ನಿಸ್ವಾರ್ಥತೆಯ ಸಂಕೇತ. ಒಟ್ಟಿನಲ್ಲಿ ಸಂಘರ್ಷಗಳು ಇದ್ದದ್ದೇ. 2022ರ ಏಪ್ರಿಲ್ ನಂತರ ಶನಿಯೂ ಮೂಲ ತ್ರಿಕೋಣ ಕುಂಭಕ್ಕೆ ಪ್ರವೇಶ ಮಾಡುವುದರಿಂದ ಹಲವಾರು ಸತ್ಕರ್ಮಗಳು ನಡೆಯಲಿವೆ, ಪ್ರಜೆಗಳ ಬಯಕೆಗಳು ಈಡೇರಲಿವೆ. ಇನ್ನು ಮೂರು ವರ್ಷ ಉತ್ತಮ ಆಡಳಿತ ನೀಡಿ, ಯೋಗಿ ಆದಿತ್ಯನಾಥ್ ಇನ್ನೂ ಉನ್ನತ ಪೀಠ ಏರುವ ಸೂಚನೆಯನ್ನೂ ಈ ಮುಹೂರ್ತ ತಿಳಿಸುತ್ತದೆ. ಅಂದರೆ ಕೇಂದ್ರದಲ್ಲಿ ಸಚಿವರೋ ಅಥವಾ “ಪ್ರಧಾನ” ಹುದ್ದೆಗೇ ಏರಬಹುದು ಅಥವಾ ಪಕ್ಷದಲ್ಲಿ ಬಹಳ ಮಹತ್ತರ ಹುದ್ದೆಯನ್ನು ಅಲಂಕರಿಸುವ ಮುನ್ಸೂಚನೆ ಇದಾಗಿದೆ ಎನ್ನುತ್ತಾರೆ ಕರ್ನಾಟಕದ ಖ್ಯಾತ ಜ್ಯೋತಿಷಿ.
Very interesting info!Perfect just what I was searching for!Raise your business