ಬೆಳ್ತಂಗಡಿ : ಮನೆಯಂಗಳಕ್ಕೆ ಹೆಬ್ಬಾವನ್ನು ಅಟ್ಟಿಸಿಕೊಂಡು ಬಂದ ಬೃಹತ್ ಗಾತ್ರದ ಕಾಳಿಂಗ ಸರ್ಪ !! | ಎರಡೂ ಹಾವುಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ ಸ್ನೇಕ್ ಅಶೋಕ್
ಸುಮಾರು 8 ಅಡಿ ಉದ್ದದ ಹೆಬ್ಬಾವನ್ನು ಅಟ್ಟಿಸಿಕೊಂಡು 14 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಮನೆಯಂಗಳಕ್ಕೆ ಬಂದ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟಿನಲ್ಲಿ ನಡೆದಿದ್ದು, ಎರಡು ಹಾವುಗಳನ್ನು ಸ್ನೇಕ್ ಅಶೋಕ್ ಅವರು ರಕ್ಷಣೆ ಮಾಡಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಪಾದೆ ಮನೆಯ ಜೀವಂದರ್ ಜೈನ್ ಅವರ ಮನೆ ಬಳಿ ಕಾಳಿಂಗ ಸರ್ಪ ಕಂಡು ಬಂದಿತ್ತು. ಸಂಜೆ ವೇಳೆ ಮನೆಯವರು ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ತಕ್ಷಣ ತಮ್ಮ ಸಹಾಯಕ ಪ್ರೇಮ್ ಸಾಗರ್ ಅವರನ್ನು ಅಲ್ಲಿಗೆ ಕಳುಹಿಸಿದ್ದರು. ಈ ವೇಳೆ ಅಲ್ಲಿ ಹೆಬ್ಬಾವು ಪತ್ತೆಯಾಗಿದೆ. ಅದನ್ನು ಹಿಡಿದ ಬಳಿಕ ಮನೆಮಂದಿ ನಾವು ನೋಡಿದ್ದು ಕಾಳಿಂಗ ಸರ್ಪ ಎಂದಿದ್ದಾರೆ.
ತಕ್ಷಣ ಸ್ನೇಕ್ ಅಶೋಕ್ ಲಾಯಿಲ ಅವರೇ ಸ್ಥಳಕ್ಕೆ ಬಂದು ಕಾಳಿಂಗ ಸರ್ಪಕ್ಕಾಗಿ ತೋಟವೆಲ್ಲಾ ಹುಡುಕಾಟ ನಡೆಸಿದ್ದಾರೆ. ರಾತ್ರಿ ವೇಳೆ ತೆಂಗಿನ ಮರದ ಬುಡದಲ್ಲಿ ಅವಿತುಕೊಂಡಿದ್ದ ಕಾಳಿಂಗ ಸರ್ಪ ಪತ್ತೆಯಾಗಿದೆ. ಬಳಿಕ ಎರಡನ್ನೂ ರಕ್ಷಣೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.