ಉಡುಪಿ:ಜಿಲ್ಲೆಯಲ್ಲೇ ಮೊದಲು ಸಂಪೂರ್ಣ ಹವಾನಿಯಂತ್ರಿತ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಸಜ್ಜು!!ತಂಪಾದ ಕೊಠಡಿಯಲ್ಲಿ ಪುಟಾಣಿಗಳಿಗೆ ಏನೆಲ್ಲ ಸಿಗಲಿದೆ ಗೊತ್ತಾ!?
ಉಡುಪಿ: ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರ ಸತತ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಹವಾನಿಯಂತ್ರಿತ ಅಂಗನವಾಡಿ ಕೇಂದ್ರವೊಂದು ಉದ್ಘಾಟನೆಗೆ ಸಜ್ಜಾಗಿ ನಿಂತಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಂ.ಪಂ ವ್ಯಾಪ್ತಿಯ ಬಂಟಕಲ್ಲು ಎಂಬಲ್ಲಿ ದಾನಿಗಳ, ಸಂಘ ಸಂಸ್ಥೆಗಳ ಸಂಪೂರ್ಣ ಸಹಕಾರದಿಂದ ಹವಾನಿಯಂತ್ರಿತ ಅಂಗನವಾಡಿ ಕೇದ್ರವು ನಿರ್ಮಾಣಗೊಂಡಿದ್ದು, ಮಾರ್ಚ್ 20, ಇಂದು ಉದ್ಘಾಟನೆಗೊಳ್ಳಲಿದೆ. ದಿ. ಅಚ್ಚುತ ಕಾಮತ್ ಎಂಬವರು ಗ್ರಾಂ.ಪಂ.ಗೆ ದಾನವಾಗಿ ನೀಡಿದ 6 ಸೆಂಟ್ಸ್ ಜಾಗದಲ್ಲಿ ಸುಮಾರು 35 ವರ್ಷ ಹಳೆಯ, ತೀರಾ ದುಸ್ಥಿತಿಯಲ್ಲಿದ್ದ ಕಟ್ಟಡದಲ್ಲಿ ಈ ಮೊದಲು ಅಂಗನವಾಡಿ ಕೇಂದ್ರವು ಕಾರ್ಯನಿರ್ವಹಿಸುತ್ತಿತ್ತು.
ಅಂದಿನ ಗ್ರಾಂ.ಪಂ ಸದಸ್ಯ ಕೆ.ಆರ್ ಪಾಟೀಲ್ ಅವರ ಸತತ ಪ್ರಯತ್ನದಿಂದ, ಲೋಕೋಪಯೋಗಿ ಇಲಾಖೆ, ಊರ ಪರವೂರ ದಾನಿಗಳ, ಸ್ಥಳೀಯ ಸಂಘ ಸಂಸ್ಥೆಗಳ ನೆರವಿನ 4 ಲಕ್ಷ ರೂಪಾಯಿ ಮೊತ್ತದಲ್ಲಿ ಸಂಪೂರ್ಣ ಹವಾನಿಯಂತ್ರಿತ ಹೊಸ ಕಟ್ಟಡದಲ್ಲಿ ಅಂಗನವಾಡಿ ಕಾರ್ಯನಿರ್ವಾಹಿಸಲು ಸಜ್ಜಾಗಿ ನಿಂತಿದೆ.
ಇನ್ನು ಜಿಲ್ಲೆಯಲ್ಲೇ ಮೊದಲು ಮಾದರಿ ಹವಾನಿಯಂತ್ರಿತ ಅಂಗನವಾಡಿ ಕೇಂದ್ರದ ಉದ್ಘಾಟನೆಯಲ್ಲಿ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ದಾನಿಗಳು ಭಾಗವಹಿಸಲಿದ್ದು, ಗ್ರಾಮದ ಎಲ್ಲಾ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸನ್ಮಾನ, ಗೌರವ ನಡೆಯಲಿದೆ ಎಂದು ತಿಳಿದುಬಂದಿದೆ.