ಪಿಕಪ್ ಟ್ರಕ್ ಓಡಿಸುತ್ತಾ ವ್ಯಾನ್ಗೆ ಡಿಕ್ಕಿ ಹೊಡೆದ ಅಪ್ರಾಪ್ತ ಬಾಲಕ | 9 ಮಂದಿ ಸ್ಥಳದಲ್ಲೇ ಸಾವು, ಹಲವರ ಸ್ಥಿತಿ ಗಂಭೀರ
ಅಪ್ರಾಪ್ತ ಬಾಲಕನೊಬ್ಬ ಪಿಕಪ್ ಟ್ರಕ್ ಓಡಿಸಿ, ವ್ಯಾನ್ಗೆ ಡಿಕ್ಕಿ ಹೊಡೆದ ಪರಿಣಾಮ 9 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಪಶ್ಚಿಮ ಟೆಕ್ಸಾಸ್ನಲ್ಲಿ ನಡೆದಿದೆ.
ನ್ಯೂ ಮೆಕ್ಸಿಕೋ ಮೂಲದ ಯೂನಿವರ್ಸಿಟಿ ಆಫ್ ಸೌತ್ವೆಸ್ಟ್ ಗಾಲ್ಫ್ ತಂಡದ ಆರು ಸದಸ್ಯರು ತಮ್ಮ ಶಿಕ್ಷಕರೊಂದಿಗೆ ವ್ಯಾನ್ನಲ್ಲಿ ರಾತ್ರಿ ತಮ್ಮ ಮನೆಗಳಿಗೆ ಹೋಗುತ್ತಿದ್ದರು. ಅದೇ ರಸ್ತೆಯಲ್ಲಿ 13 ವರ್ಷದ ಬಾಲಕ ತನ್ನ ತಂದೆಯೊಂದಿಗೆ ಟ್ರಕ್ ಓಡಿಸುತ್ತ ವೇಗವಾಗಿ ಬಂದಿದ್ದಾನೆ. ನಿಯಂತ್ರಣ ಸಿಗದೇ ವ್ಯಾನ್ಗೆ ಬಾಲಕ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ವ್ಯಾನ್ನಲ್ಲಿದ್ದ ಸುಮಾರು 9 ಜನರು ಸಾವನ್ನಪ್ಪಿದ್ದಾರೆ. ಟೆಕ್ಸಾಸ್ನ ಆಂಡ್ರ್ಯೂಸ್ ಬಳಿ ಸಂಭವಿಸಿದ ಈ ಅಪಘಾತದಲ್ಲಿ ಪಿಕಪ್ ಟ್ರಕ್ನಲ್ಲಿ ಸವಾರಿ ಮಾಡುತ್ತಿದ್ದ 13 ವರ್ಷದ ಹುಡುಗ ಮತ್ತು ಅವನ 38 ವರ್ಷದ ತಂದೆ ಕೂಡ ಸಾವನ್ನಪ್ಪಿದ್ದಾರೆ.
ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ ಉಪಾಧ್ಯಕ್ಷ ಈ ಕುರಿತು ಮಾಹಿತಿ ನೀಡಿದ್ದು, ಅಪಘಾತದ ಸಮಯದಲ್ಲಿ ಅಪ್ರಾಪ್ತ ವಯಸ್ಕನು ಪಿಕಪ್ ಟ್ರಕ್ನ ಚಕ್ರದ ಹಿಂದೆ ಸಿಕ್ಕಿಕೊಂಡಿದ್ದ. ಅಲ್ಲದೇ 13 ವರ್ಷದ ಬಾಲಕ ಟೆಕ್ಸಾಸ್ ಕಾನೂನನ್ನು ಉಲ್ಲಂಘಿಸಿದ್ದನು. ಟೆಕ್ಸಾಸ್ ನಿವಾಸಿಯು 15 ವರ್ಷ ಕಳೆದ ಮೇಲೆ ಪರವಾನಗಿಯನ್ನು ಪಡೆಯಬಹುದು. 21 ವರ್ಷಕ್ಕಿಂತ ಮೇಲ್ಪಟ್ಟ ನಂತರ ವಾಹನ ಚಾಲನೆ ಮಾಡಲು ಅನುವು ಮಾಡಿಕೊಡಲಾಗುತ್ತೆ. ಆದರೆ 13 ವರ್ಷದ ಬಾಲಕ ಕಾನೂನನ್ನು ಉಲ್ಲಂಘಿಸಿದ್ದಾನೆ ಎಂದು ವಿವರಿಸಿದರು.
ವರದಿಗಳ ಪ್ರಕಾರ ಎರಡೂ ವಾಹನಗಳು ಹೆಚ್ಚು ವೇಗವಾಗಿ ಬರುತ್ತಿದ್ದು, ನಿಯಂತ್ರಣ ಸಿಗದೇ ಈ ಭಾರೀ ಅಪಘಾತ ನಡೆದಿದೆ. ಘಟನೆಯಲ್ಲಿ 9 ಜನರು ಸಾವನ್ನಪ್ಪಿದ್ದು, ಇಬ್ಬರು ವಿದ್ಯಾರ್ಥಿಗಳು, ಇಬ್ಬರು ಕೆನಡಿಯನ್ನರು ಗಂಭೀರ ಸ್ಥಿತಿಯಲ್ಲಿದ್ದಾರೆ. ಪ್ರಸ್ತುತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.