ಭೂಮಿ ಸರ್ವೆ ಮಾಡಿ ಗಡಿಯನ್ನು ನಿಗದಿಪಡಿಸುವ ಅಧಿಕಾರ ತಹಶೀಲ್ದಾರ್ಗೆ ಇದೆ- ಹೈ ಕೋರ್ಟ್
ಬೆಂಗಳೂರು : ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 140(2)ರಡಿಯಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯೊಳಗೆ ಬರುವ ಭೂಮಿಯ ಸರ್ವೆ ಮಾಡಿ ಗಡಿಯನ್ನ ನಿಗದಿಪಡಿಸುವ ಅಧಿಕಾರ ತಹಶೀಲ್ದಾರ್ ಅವರಿಗೆ ಇದೆ ಎಂದು ರಾಜ್ಯ ಹೈಕೋರ್ಟ್ ಹೇಳಿದೆ.
ಬೆಂಗಳೂರು ಬಸವನಗುಡಿಯ ನಿವಾಸಿ ಸುನಿಲ್ ಚಜೆಡ್ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದ್ದು, ‘ಭೂಮಿಯ ಸರ್ವೆ ಮಾಡಿ ಗಡಿಯನ್ನು ನಿಗದಿಪಡಿಸುವ ಅಧಿಕಾರ ತಹಶಿಲ್ದಾರ್ಗಿದೆ’ ಎಂದಿದೆ.
‘ಕಾಯಿದೆಯ ಸೆಕ್ಷನ್ 140(2)ರ ಅಡಿಯಲ್ಲಿ ಸರ್ವೆ ನಂಬರ್ನ ಗಡಿಯನ್ನ ನಿರ್ಧರಿಸುವ ಅಧಿಕಾರ ತಹಶೀಲ್ದಾರ್ಗಿದೆ. ಈ ಅಧಿಕಾರವನ್ನ ಪುರಸಭೆಯ ವ್ಯಾಪ್ತಿಯಲ್ಲಿ ಅಥವಾ ಪುರಸಭೆಯ ಮಿತಿಯ ಹೊರಗಿದೆಯಾ ಎನ್ನುವ ಅಂಶವನ್ನು ಲೆಕ್ಕಿಸದೆ ಸರ್ವೆ ಸಂಖ್ಯೆ ಅಥವಾ ಹಿಡುವಳಿಗಳಿಗೆ ಸಂಬಂಧಿಸಿದಂತೆ ಸರ್ವೆ ನಡೆಸಬಹುದು’ ಎಂದು ನ್ಯಾಯಾಲಯ ತಿಳಿಸಿದೆ.
ಸರ್ವೆ ನಂಬರಿನ ಗಡಿಗೆ ಸಂಬಂಧಿಸಿದಂತೆ ಯಾವುದೇ ವಿವಾದ ಉಂಟಾದರೆ, ಭೂ ದಾಖಲೆಗಳನ್ನ ಪರಿಗಣಿಸಿ ವಿವಾದವನ್ನ ತಹಶೀಲ್ದಾರ್ ನಿರ್ಧರಿಸುತ್ತಾರೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.