ಸರ್ಕಾರಿ ಭೂಮಿ ಕಬಳಿಸುವವರೇ ಎಚ್ಚರ !! | ಕಾನೂನುಬಾಹಿರವಾಗಿ ಭೂಕಬಳಿಕೆ ಮಾಡಿದರೆ ಜೈಲು ಶಿಕ್ಷೆ ಜೊತೆಗೆ ಭಾರೀ ದಂಡ ಪಕ್ಕಾ
ಕಾನೂನು ಬಾಹಿರವಾಗಿ ಎಲ್ಲೆಂದರಲ್ಲಿ ಸರ್ಕಾರಿ ಜಮೀನು, ಜಾಗ, ಆಸ್ತಿಗಳನ್ನು ಒತ್ತುವರಿ ಮಾಡಿಕೊಳ್ಳುವುದು ಹಿಂದಿನಿಂದಲೂ ನಡೆಯುತ್ತಲೇ ಇದೆ. ಆದರೆ ಇದಕ್ಕೆಲ್ಲಾ ಕಡಿವಾಣ ಬೀಳುವ ಸಮಯ ಹತ್ತಿರ ಬಂದಿದ್ದು, ಹೀಗೆ ಅತಿಕ್ರಮಣ ಮಾಡಿಕೊಂಡು ಅಕ್ರಮ ಚಟುವಟಿಕೆಗಳನ್ನು ಮಾಡುವುದನ್ನು ತಡೆಗಟ್ಟವ ಸಲುವಾಗಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಸೆಕ್ಷೆನ್ 192(ಎ) ಪ್ರಕಾರ ಸರ್ಕಾರದ ಭೂಮಿಯನ್ನು ಕಬಳಿಕೆಯ ಮಾಡುವ ಉದ್ದೇಶದಿಂದ ಯಾವುದೇ ಸರ್ಕಾರಿ ಭೂಮಿಯನ್ನು ಕಾನೂನು ಬಾಹಿರವಾಗಿ ಪ್ರವೇಶಿಸುವುದು ಅಥವಾ ಸ್ವಾಧೀನಪಡಿಸಿಕೊಳ್ಳುವುದು ಅಪರಾಧ. ಹೀಗೆ ಮಾಡಿದವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 50ಸಾವಿರ ದಂಡ ವಿಧಿಸಬಹುದು ಎಂದು ತಿಳಿಸಿದೆ.
ಈ ಕಾಯ್ದೆ ಕೊಡಗು ಜಿಲ್ಲೆಯಲ್ಲಿ ಜಮ್ಮಾ, ಬಾಣೆ ಭೂಮಿಗಳ ಅಥವಾ ಒತ್ತುವರಿ ಮಾಡಿಕೊಂಡಿರುವುದನ್ನು ಸಕ್ರಮಗೊಳಿಸಿರುವ ಅಥವಾ 94 ಎ, 94 ಬಿ ಮತ್ತು 94 ಸಿ ಪ್ರಕರಣಗಳ ಮೇರೆಗೆ ರಚಿಸಲಾದ ಸಮಿತಿಗೆ ಅನ್ವಯ ಆಗುವುದಿಲ್ಲ ಎಂದು ತಿಳಿಸಿದೆ. ಭಾರಿ ಪ್ರಮಾಣದಲ್ಲಿ ಸರ್ಕಾರಿ ಜಮೀನು ಕಬಳಿಕೆ ಆಗಿದ್ದು, ಅದರ ಮೇಲೆ ಕಠಿಣ ಕ್ರಮ ಜರುಗಿಸಲು ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯವನ್ನೂ ಕೂಡ ಸ್ಥಾಪಿಸಲಾಗಿದೆ.
ಅರಣ್ಯ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಒತ್ತುವರಿ ಮಾಡಿದ ಭೂಮಿಯನ್ನು ಸಕ್ರಮಗೊಳಿಸಲು ಕರ್ನಾಟಕ ಭೂಕಂದಾಯ ಕಾಯ್ದೆಯ 192 (ಎ) ಕಲಂಮಿಗೆ ತಿದ್ದುಪಡಿ ಮಾಡುವುದಾಗಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದ್ದಾರೆ.
ಅರಣ್ಯವಾಸಿಗಳು ಕೃಷಿಗಾಗಿ ಭೂ ಒತ್ತುವರಿ ಮಾಡುವುದನ್ನು ಭೂ ಕಬಳಿಕೆ ಎಂದು ತಪ್ಪು ಅರ್ಥೈಸಿಕೊಳ್ಳಲಾಗುತ್ತಿದೆ. ಹಾಗೇ ಇದನ್ನೇ ಭೂ ಕಬಳಿಕೆ ಎಂದು ನ್ಯಾಯಾಲಯದ ವ್ಯಾಪ್ತಿಗೆ ಕರೆತರಲಾಗುತ್ತಿದೆ. ಇದರಿಂದ ಅರಣ್ಯಗಳಲ್ಲಿ ವಾಸಿಸುವ ರೈತರಿಗೆ ತುಂಬ ತೊಂದರೆ ಉಂಟಾಗುತ್ತಿದೆ. ಇದೆಲ್ಲವನ್ನೂ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದು. ರೈತರಿಗೆ ಅನುಕೂಲ ಮಾಡಿಕೊಟ್ಟು, ಈಗಾಗಲೇ ಕೃಷಿಗಾಗಿ ಅರಣ್ಯ ಪ್ರದೇಶದ ರೈತರು ಒತ್ತುವರಿ ಮಾಡಿದ ಭೂಮಿಯನ್ನು ಸಕ್ರಮಗೊಳಿಸಲು 192 (ಎ) ಕಾಯ್ದೆಯನ್ನು ತಿದ್ದುಪಡಿ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.