ಕರ್ನಾಟಕದಲ್ಲೇ ಅಭೂತಪೂರ್ವ ಬದಲಾವಣೆ ತಂದ ಕಾಲೇಜು| ಈ ಕಾಲೇಜಿನ ಮಹಿಳಾ ಸಿಬ್ಬಂದಿಗಳಿಗೆ ಇನ್ನು ಮುಂದೆ ‘ ಮುಟ್ಟಿನ ರಜೆ’
ನಾವೆಲ್ಲರೂ ಹೆರಿಗೆ ರಜೆಯನ್ನು ಒಂದು ಸಂಸ್ಥೆ ಅಥವಾ ಕಚೇರಿಯಲ್ಲಿ ನೀಡುವುದನ್ನು ಕೇಳಿದ್ದೇವೆ. ಬಹುತೇಕರಿಗೆ ಇದು ಗೊತ್ತಿರುವ ವಿಚಾರ. ಇತ್ತೀಚೆಗೆ ಸ್ತ್ರೀಯರು ಅವರ ಮುಟ್ಟಿನ ಸಂದರ್ಭದಲ್ಲಿ ಅವರಿಗೆ ರಜೆಯನ್ನು ನೀಡಬೇಕೆಂದು ದೇಶಾದ್ಯಂತ ಚರ್ಚೆ ನಡೆಯುತ್ತಿದೆ.
ಕೆಲವು ದಿನಗಳ ಹಿಂದಷ್ಟೇ ಪ್ರಮುಖ ತಮಿಳು ಟೆಲಿವಿಷನ್ ಚಾನೆಲ್‌ವೊಂದು ತನ್ನ ಮಹಿಳಾ ಸಿಬ್ಬಂದಿಗಳಿಗೆ ಅವರ ಮುಟ್ಟಿನ ಸಂದರ್ಭದಲ್ಲಿ ರಜೆ ನೀಡುವುದಾಗಿ ಹೇಳಿದ ಸುದ್ದಿ ವೈರಲ್ ಆಗಿತ್ತು. ತಮಿಳಿನ ಈ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ತಿಂಗಳಿಗೆ ನಾಲ್ಕು ಮುಟ್ಟಿನ ರಜೆ ಕೊಡುತ್ತಾರೆ.
ಅರುಣಾಚಲ ಪ್ರದೇಶದಂತಹ ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಅಲೋ ಲಿಬಾಂಗ್ ಅವರು ಕೂಡಾ ಇತ್ತೀಚೆಗೆ ವಿಧಾನಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ ನಂತರ ರಾಜ್ಯದಲ್ಲಿ ಮಹಿಳೆಯರಿಗೆ ಒಂದು ದಿನದ ಋತುಸ್ರಾವದ ರಜೆ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಆದರೆ ಮುಖ್ಯವಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಮೈಸೂರಿನಲ್ಲಿರುವ ಕಾಲೇಜು ಇತ್ತೀಚೆಗೆ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿದ ಸಂದರ್ಭದಲ್ಲಿ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ತನ್ನ ಮಹಿಳಾ ಸಿಬ್ಬಂದಿಗೆ ಅವರ ಮುಟ್ಟಿನ ಸಮಯದಲ್ಲಿ ಒಂದು ದಿನದ ರಜೆಯನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ. ಗ್ಲೋಬಲ್ ಎಜುಕೇಷನ್ ಟ್ರಸ್ಟ್ (GET) ನ ದಕ್ಷ ಕಾಲೇಜಿನಲ್ಲಿ ಈ ಒಂದು ಅಭೂತಪೂರ್ವ ಬದಲಾವಣೆ ಅಥವಾ ನಿರ್ಧಾರ ಮಾಡಲಾಗಿದೆ.
ಈ ಕಾಲೇಜಿನ ಪ್ರಾಂಶುಪಾಲರಾದ ಅಭಿಷೇಕ್ ಅವರು ಹೇಳುವ ಪ್ರಕಾರ, “ಕೆಲಸದ ವಾತಾವರಣದಲ್ಲಿ ಅರ್ಥಪೂರ್ಣ ಬದಲಾವಣೆ ಸೃಷ್ಟಿಸುವುದು ನಮ್ಮ ಉದ್ದೇಶವಾಗಿದ್ದು ಹಾಗೆನೇ ಕಾಲೇಜಿನ ಮಹಿಳಾ ಉದ್ಯೋಗಿಗಳು ಈಗ ಮುಟ್ಟಿನ ರಜೆಯನ್ನು ಪಡೆಯಬಹುದು ಎಂದು ಹೇಳಿದ್ದಾರೆ. ಏಕೆಂದರೆ ಅವರು ದೈಹಿಕ ಅಸ್ವಸ್ಥತೆ ಮತ್ತು ಭಾವನಾತ್ಮಕ ಯಾತನೆಯಿಂದ ಬಳಲುತ್ತಾರೆ ಹಾಗೆನೇ ಈ ಸಮಯದಲ್ಲಿ ವಿಶ್ರಾಂತಿಯ ಅಗತ್ಯವಿರುತ್ತದೆ. ಅವರು ಮುಟ್ಟಿನ ಸಮಯದಲ್ಲಿ ಒಂದು ರಜೆಯನ್ನು ವೈಯಕ್ತಿಕ ರಜೆಯಾಗಿ ಪಡೆಯಬಹುದು” ಎಂದು ಹೇಳಿದ್ದಾರೆ.