ಹೋಟೆಲ್ ನಲ್ಲಿ ಕುಡಿದು ರಂಪಾಟ ಮಾಡಿ, ಬಿಲ್ ಕೇಳಿದ್ದಕ್ಕೆ‌ ಬಿಸಿ ಎಣ್ಣೆ ಎರಚಿದ ದುಷ್ಕರ್ಮಿಗಳು |

Share the Article

ಹೋಟೆಲ್ ರೊಂದರಲ್ಲಿ ಮದ್ಯಪಾನ ಮಾಡಿ, ಊಟ ಮಾಡಿ ಬಿಲ್ ಕೇಳಿದ್ದಕ್ಕೆ, ದುಷ್ಕರ್ಮಿಗಳು ಬಿಸಿ ಎಣ್ಣೆ ಎರಚಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ.

ಭದ್ರಾವತಿಯ ಜನ್ನಾಪುರದ ಕಮರ್ಷಿಯಲ್ ಸ್ಟ್ರೀಟ್ ಮದ್ಯದ ಅಂಗಡಿಯಲ್ಲಿ ಮದ್ಯಪಾನ ಮಾಡಿದ ನಂತರ ದುಷ್ಕರ್ಮಿಗಳು ಹತ್ತಿರದಲ್ಲೇ ಇದ್ದ ಹೋಟೆಲ್ ಊಟಕ್ಕೆಂದು ಹೋಗಿದ್ದಾರೆ.

ಮಾಂಸದೂಟ ಸೇವಿಸಿ ಬಿಲ್ ಕೇಳಲು ಬಂದ ವ್ಯಕ್ತಿಯ ಜೊತೆ ಗಲಾಟೆ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೇ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿಯನ್ನು ಥಳಿಸಿದ್ದಾರೆ. ಇದನ್ನು ಪ್ರಶ್ನಿಸಿದ ಮಾಲೀಕನೊಂದಿಗೂ ದುಷ್ಕರ್ಮಿಗಳು ಅಸಭ್ಯವಾಗಿ ನಡೆದುಕೊಂಡಿದ್ದಾರೆ.

ಮಾಲೀಕನ ಪರವಾಗಿ ಮಾತನಾಡಲು ಬಂದ ಹೋಟೆಲ್ ನ ಅಡುಗೆ ಭಟ್ಟರಾದ ಮನೋಜ್ ಕುಮಾರ್ ಮೇಲೆ ಈ ದುಷ್ಕರ್ಮಿಗಳು ಬಾಣಲೆಯಲ್ಲಿದ್ದ ಬಿಸಿ ಎಣ್ಣೆಯನ್ನು ಎರಚಿದ್ದಾರೆ. ಇದರಿಂದ ಮನೋಜ್ ಕುಮಾರ್ ಮುಖ ಸುಟ್ಟು ಕರಕಲಾಗಿದ್ದು, ಅವರಿಗೆ ಕಣ್ಣು ತೆರೆಯಲು ಆಗುತ್ತಿಲ್ಲ. ಕಿವಿ ಕೂಡ ಕೇಳಿಸದಂತಾಗಿದ್ದು, ಗಂಭೀರ ಗಾಯಗೊಂಡ ಇವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ದುಷ್ಕರ್ಮಿಗಳು ಹುತ್ತ ಕಾಲೋನಿ ಮತ್ತು ಜಿಂಕ್ ಲೈನ್ ನಿವಾಸಿಗಳಾಗಿರುವ ಅಜಯ್, ಜಗದೀಶ್, ದೀಪು, ಯೋಗೇಶ್ ಎಂದು ಗುರುತಿಸಲಾಗಿದೆ. ಗಾಂಜಾ ಸೇವನೆ ಮಾಡಿ ಇಂತಹ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ನ್ಯೂಟನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

Leave A Reply