ಜಾತಿ ಹೆಸರಿರುವ ಗ್ರಾಮಗಳನ್ನು ತಕ್ಷಣ ತೆಗೆದು ಹಾಕಲು ಸೂಚನೆ-ಕಂದಾಯ ಸಚಿವ ಆರ್.ಅಶೋಕ್
ಬೆಂಗಳೂರು :ರಾಜ್ಯದಲ್ಲಿ ಜಾತಿ ಸೂಚಕ ಹೆಸರುಗಳಿದ್ದು, ಆ ಗ್ರಾಮಗಳ ಹೆಸರನ್ನು ರದ್ದುಪಡಿಸಲು ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಗೆ ತಿಳಿಸಿದರು.
ಶಾಸಕ ಬಸನಗೌಡ ತುರವಿಹಾಳ್ ಅವರ ಪ್ರಶ್ನೆಗೆ ಸಚಿವರು, ಕೆಲವು ಕಡೆ ವಡ್ಡರಹಟ್ಟಿ, ಕುರುಬರ ಹಟ್ಟಿ ಹೀಗೆ ನಾನಾ ರೀತಿ ಜಾತಿ ಸೂಚಕ ಹೆಸರಿನಲ್ಲಿ ಗ್ರಾಮಗಳನ್ನು ನಾಮಕರಣ ಮಾಡಿಕೊಂಡಿದ್ದಾರೆ. ತಕ್ಷಣವೇ ಜಾತಿ ಹೆಸರಿರುವ ಗ್ರಾಮಗಳನ್ನು ತೆಗೆದು ಹಾಕಲು ಸೂಚನೆ ನೀಡುವುದಾಗಿ ಹೇಳಿದರು.
ಈ ವೇಳೆ ಕಾಂಗ್ರೆಸ್ ಶಾಸಕ ರಮೇಶ್‍ಕುಮಾರ್ ಅವರು ಮಧ್ಯಪ್ರವೇಶಿಸಿ, ಕೆಲವು ಕಡೆ ವಡ್ಡರಪಾಳ್ಯ, ಮಾದಿಗರಹಳ್ಳಿ ಸೇರಿದಂತೆ ಜಾತಿಸೂಚಕ ಹೆಸರನ್ನು ಗ್ರಾಮಗಳಿಗೆ ಇಟ್ಟುಕೊಂಡಿದ್ದಾರೆ. ದಯವಿಟ್ಟು ಇದನ್ನು ತೆಗೆದು ಹಾಕಲು ನಿಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಡಿ . ಇದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಇದೆಲ್ಲ ಕೇವಲ ಕೆಲವೇ ದಿನಗಳು ನಡೆಯುವ ಪ್ರಕ್ರಿಯೆ ಎಂದು ಸಲಹೆ ಮಾಡಿದರು.
ಆಗ ಸಚಿವ ಅಶೋಕ್ ಅವರು ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರ ಹಟ್ಟಿ,ಮಜರೇ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್ ಕಾಲೋನಿ ಇತರೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು. ಇದು ಒಂದೆರಡು ತಿಂಗಳಲ್ಲಿ ನಡೆಯುವ ಪ್ರಕ್ರಿಯೆ ಅಲ್ಲ. ಎಷ್ಟೇ ವೇಗವಾಗಿ ಪ್ರಕ್ರಿಯೆಗಳು ನಡೆದರೂ ಕನಿಷ್ಟ 8ರಿಂದ 9 ತಿಂಗಳು ಬೇಕಾಗುತ್ತದೆ ಎಂದರು.
ಆಗ ಶಾಸಕ ಅಶೋಕ್ ನಾಯಕ್ ಮಧ್ಯಪ್ರವೇಶಿಸಿ ಉಪಗ್ರಹಗಳ ಮೂಲಕ ನಕ್ಷೆ ತಯಾರಿಸಿ ಕಂದಾಯ ಗ್ರಾಮಗಳನ್ನು ಗುರುತಿಸಬಹುದು.ಇದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಎಂದು ಸಲಹೆ ಮಾಡಿದರು.ಇದಕ್ಕೆ ದನಿಗೂಡಿಸಿದ ಶಾಸಕ ಪಿ.ರಾಜೀವ್ ಅವರು, ಕೇಂದ್ರ ಸರ್ಕಾರ ಸ್ವಾಮಿತ್ವ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು ಬಳಸಿಕೊಂಡು ಕಂದಾಯ ಗ್ರಾಮಗಳನ್ನು ಗುರುತಿಸಬಹುದು. ಈಗಾಗಲೇ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಇದು ಯಶಸ್ವಿಯಾಗಿದೆ. ಇದನ್ನು ರಾಜ್ಯಾದ್ಯಂತ ಬಳಸಿಕೊಳ್ಳಬೇಕು ಎಂದರು.
ಶಾಸಕರು ನೀಡಿರುವ ಸಲಹೆಗಳನ್ನು ಖಂಡಿತವಾಗಿಯೂ ಪರಿಗಣಿಸುವುದಾಗಿ ಅಶೋಕ್ ಹೇಳಿದರು. ರಾಜ್ಯದಲ್ಲಿರುವ ಲಂಬಾಣಿ, ಗೊಲ್ಲ, ಭೋವಿ, ನಾಯಕ, ಸೋಲಿಗ, ಕಾಡುಕುರುಬ ಸೇರಿದಂತೆ ದುರ್ಬಲ ಸಮುದಾಯಗಳ ಜನರ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ.
ರಾಜ್ಯದಲ್ಲಿ 3,499 ದಾಖಲೆರಹಿತ ಜನವಸತಿ ಪ್ರದೇಶಗಳ ಪೈಕಿ 632 ಗ್ರಾಮಗಳಿಗೆ ಪ್ರಾಥಮಿಕ ಅಸೂಚನೆ ಹೊರಡಿಸಲಾಗಿದೆ. 1441 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. ಇನ್ನಳಿದವುಗಳಿಗೆ ಕಾಲಾವಕಾಶ ಬೇಕಾಗುತ್ತದೆ ಎಂದರು.ನಾನು ಕಂದಾಯ ಸಚಿವನಾದ ಮೇಲೆ ರಾಜ್ಯದ ಯಾವುದೇ ಭಾಗದಲ್ಲೂ ಸ್ಮಶಾನಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಸಾಮಾನ್ಯರು ಹೀಗೆ ತಾರತಮ್ಯ ಮಾಡದೆ ಎಲ್ಲರಿಗೂ ಏಕರೀತಿಯ ಸ್ಮಶಾಸನವನ್ನು ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು.