ಮದುವೆಗೆ ಸುಂದರವಾಗಿ ಕಾಣಬೇಕೆಂದು ಕೂದಲು ಕಸಿ ಮಾಡಿಕೊಂಡಾತ, ಚಿಕಿತ್ಸೆ ಪಡೆದ ಮರುದಿನವೇ ಮಸಣ ಸೇರಿದ !!

ಮದುವೆ ಎಂದರೆ ಸಾಕು, ವಧು-ವರರ ತಯಾರಿ ಅಷ್ಟಿಷ್ಟಲ್ಲ. ತಾವು ಸುಂದರವಾಗಿ ಕಾಣಬೇಕೆಂದು ವಿವಿಧ ರೀತಿಯ ಸೌಂದರ್ಯವರ್ಧಕ ಪ್ರಯೋಗಗಳನ್ನು ಕೂಡ ಮಾಡುವುದುಂಟು. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ತನ್ನ ಮದುವೆಗಾಗಿ ಕೂದಲು ಕಸಿ ಮಾಡಿಕೊಂಡು ಮರುದಿನವೇ ಸಾವನ್ನಪ್ಪಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

 

ಮನೋರಂಜನ್ ಪಾಸ್ವಾನ್ ಮೃತ ವ್ಯಕ್ತಿ. ಈತ ಬಿಹಾರ ಮಿಲಿಟರಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದ. ಕೂದಲು ಕಸಿಗೆ ಒಳಗಾಗಿದ್ದ ಈತ ಔಷಧದ ಪರಿಣಾಮದಿಂದ ಕಸಿ ಮಾಡಿಕೊಂಡ ಒಂದೇ ದಿನದಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ.

ಮನೋರಂಜನ್‍ಗೆ ಮೇ 11 ರಂದು ಮದುವೆ ನಿಶ್ಚಯವಾಗಿತ್ತು. ಕೂದಲು ಕಸಿ ಮಾಡಿಸಿಕೊಳ್ಳುವ ಸಲುವಾಗಿ ಪಾಟ್ನಾಗೆ ಹೋಗಿದ್ದನು. ಖಾಸಗಿ ಕ್ಲಿನಿಕ್‍ನಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಕೂದಲು ಕಸಿಗೆ ಒಳಗಾಗಿದ್ದನು. ಕಸಿ ನಂತರ ಚರ್ಮದ ತುರಿಕೆಯ ಅನುಭವ ಹೇಳಿಕೊಂಡಿದ್ದನು. ಪಾಸ್ವಾನ್ ಸ್ನೇಹಿತ ಕಮಲ್ ಕುಮಾರ್ ಮರುದಿನ ಕ್ಲಿನಿಕ್‍ಗೆ ಕರೆದೊಯ್ದಿದ್ದರು. ಪಾಸ್ವಾನ್ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು.

ನಂತರ ಕ್ಲಿನಿಕ್ ಸಿಬ್ಬಂದಿ ಪಾಸ್ವಾನ್‍ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಐಸಿಯುನಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಪ್ಲಾಸ್ಟಿಕ್ ಸರ್ಜನ್, ಕಾರ್ಡಿಯಾಕ್ ಸರ್ಜನ್, ಇಂಟರ್ನಲ್ ಮೆಡಿಸಿನ್ ಮತ್ತು ಐಸಿಯು ತಜ್ಞರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಒಂದು ಗಂಟೆಯ ನಂತರ ಪಾಸ್ವಾನ್ ಸಾವನ್ನಪ್ಪಿದ್ದಾನೆ. ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ವೇಳೆ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಮದುವೆಗೆ ತಾನು ಸುಂದರವಾಗಿ ಕಾಣಿಸಬೇಕೆಂದು ಕೂದಲು ಕಸಿ ಮಾಡಿಕೊಂಡಿದ್ದ ಮನೋರಂಜನ್ ತನ್ನ ಜೀವಕ್ಕೆ ಸಂಚಕಾರ ತಂದುಕೊಂಡಿದ್ದಾನೆ. ಹಾಗಾಗಿ ಇಂತಹ ಹುಚ್ಚು ಪ್ರಯೋಗಗಳಿಗೆ ಒಳಗಾಗುವ ಮುನ್ನ ಎಚ್ಚರದಿಂದಿರುವುದು ತುಂಬಾನೇ ಮುಖ್ಯ.

Leave A Reply

Your email address will not be published.