ನೊಂದವಳ ಸಾಂತ್ವನಕ್ಕೆ ಸಖಿ..!
ಸ್ತ್ರೀ ಸಂವೇದನೆಯನ್ನು ಪ್ರಕಟಪಡಿಸಲೊಂದು ದಿನ, ಅವಳ ಹಕ್ಕುಗಳಿಗಾಗಿ ಧ್ವನಿ ಎತ್ತಲೊಂದು ದಿನ, ಅವಳ ಸಾಧನೆಯನ್ನು ಸಂಭ್ರಮಿಸಲೊಂ ದು ದಿನ ಅದು ವಿಶ್ವ ಮಹಿಳಾ ದಿನಾಚರಣೆ. ಲಿಂಗ ಸಮಾನತೆಗಾಗಿ ಪ್ರಪಂಚದ ವಿವಿಧ ಖಂಡಗಳಲ್ಲಿ ನಡೆದ ಮಹಿಳಾ ಹೋರಾಟಗಳ ನೆನಪಿಗೆ ಪ್ರತೀ ವರ್ಷ ಮಾರ್ಚ್ ೮ ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹೆಣ್ಣು ಹುಟ್ಟಿನಿಂದಲೇ ವಿವಿಧ ಹಂತಗಳಲ್ಲಿ ಶೋಷಣೆಗೆ ಒಳಗಾಗುವ ಸಾಧ್ಯತೆಗಳನ್ನು ಹೊತ್ತುಕೊಂಡೇ ಜನಿಸುತ್ತಾಳೆ. ಬದುಕಿಡೀ ಸವಾಲುಗಳಲ್ಲೇ ಅವಳ ಜೀವನ ನಡೆಯುತ್ತದೆ, ಆ ಸವಾಲುಗಳ ನಡುವೆಯೇ ಅವಳು ತನ್ನ ಅಸ್ಥಿತ್ವವನ್ನು ಬಲಗೊಳಿಸುತ್ತಾಳೆ, ಇಂತಹ ನಿಸರ್ಗದ ಒಂದು ವಿಶಿಷ್ಟ ಸೃಷ್ಠಿಯೇ ಹೆಣ್ಣು. ಹಿಂದಿನ ಕಾಲದಲ್ಲಿ ಹೆಣ್ಣಿಗೆ ಸಮಸ್ಯೆಗಳು ಹೆಚ್ಚು, ಆಧುನಿಕ ಹೆಣ್ಣಿಗೆ ಸ್ವಾತಂತ್ರ್ಯ ಹೆಚ್ಚಿದೆ, ಗೃಹಿಣಿಗೆ ಸಮಸ್ಯೆಗಳು ಹೆಚ್ಚು, ಉದ್ಯೋಗಸ್ಥ ಮಹಿಳೆಗೆ ಕಡಿಮೆ, ಈ ರೀತಿಯ ಕಲ್ಪನೆಗಳು ತಪ್ಪು. ಪ್ರತೀ ಕಾಲಮಾನದಲ್ಲೂ, ಪ್ರದೇಶಗಳಲ್ಲೂ, ಸ್ಥಿತಿಗತಿ ಯಾವುದರ ಪರಿಬೇಧವಿಲ್ಲದೆ ಮಹಿಳೆ ಸಾಮಾಜಿಕವಾಗಿ, ಕೌಟುಂಬಿಕ, ಔದ್ಯೋಗಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸವಾಲುಗಳನ್ನು ಎದುರಿಸುತ್ತಲೇ ಇದ್ದಾಳೆ. ಸಮಸ್ಯೆಗಳ ಸ್ವರೂಪ ಮಾತ್ರ ಭಿನ್ನ. ಹೀಗಾಗಿ ಮಹಿಳಾ ಸಮಾನತೆ, ಹಕ್ಕುಗಳಿಗಾಗಿ ಹೋರಾಟ, ನಿರಂತರವಾಗಿ ನಡೆದು ಬಂದಿರುವಂಥದ್ದು. ಮಹಿಳಾ ದಿನಾಚರಣೆಯ ಈ ವಿಶೇಷ ಸಂದರ್ಭ ಮಹಿಳಾ ದೌರ್ಜನ್ಯ ತಡೆಗಟ್ಟಲು ಮಹಿಳೆಯರ ಸಾಂತ್ವನ ಕೇಂದ್ರವಾಗಿ ಕಾರ್ಯ ನಿರ್ವಹಿಸುವ ಸರ್ಕಾರದ ಒಂದು ಘಟಕ ಸಖಿ ಕೇಂದ್ರ.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ನೆರವು, ಆಪ್ತ ಸಮಾಲೋಚನೆ, ಪೋಲಿಸ್, ಕಾನೂನು ನೆರವು, ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಘಟಕ ಇದು
ಲಿಂಗ ಸಮಾನತೆ ಮತ್ತು ಮಹಿಳಾ ಹಕ್ಕುಗಳು ಮತ್ತು ಮಹಿಳಾ ನಾಯಕತ್ವದ ಬಗ್ಗೆ ಮಾತನಾಡುವ ಮೊದಲು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಹಿಳೆಗೆ ಕೌಟುಂಬಿಕೆ ಸುಭದ್ರತೆ ಹೇಗಿದೆ? ಮಹಿಳಾ ದಿನಾಚರಣೆಯ ಪರಿಕಲ್ಪನೆಯಲ್ಲಿ ಇದನ್ನು ಹೇಗೆ ವಿಶ್ಲೇಷಣೆ ಮಾಡಬಹುದು ಎಂದು ಚಿಂತಿಸಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಕಛೇರಿಯನ್ನು ಹೊಂದಿರುವ ಜಿಲ್ಲಾ ಸಖೀ ಕೇಂದ್ರದ ನಿರ್ವಹಣಾಧಿಕಾರಿ ಪ್ರಿಯ ಕೆಸಿ ಯವರನ್ನು ಮಾತನಾಡಿಸಲಾಯಿತು. ಆ ಸಂದರ್ಶನದಲ್ಲಿ ಹೊರಬಂದ ಮಾಹಿತಿ ಹೀಗಿದೆ
- ಸಖಿ ಕೇಂದ್ರ ಮಹಿಳಾ ದೌರ್ಜನ್ಯ ತಡೆಗಟ್ಟುವಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಹಿಂಸೆಯನ್ನು ತಡೆಯುವಂತೆ ಮಹಿಳೆಯರಿಗೆ ಆಪ್ತಸಾಮಾಲೋಚನೆ ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸಿ ಆಕೆಯನ್ನು ಸಬಲೆಯನ್ನಾಗಿ ಪರಿವರ್ತಸಲು ಪ್ರಯತ್ನಿಸುವುದು
- ನಿಮ್ಮಲ್ಲಿ ಯಾವ ರೀತಿಯ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತದೆ?
ಪೋಕ್ಸೋ, ಅತ್ಯಾಚಾರ, ಮದುವೆಯಾಗುವುದಾಗಿ ನಂಬಿಸಿ ವಂಚನೆ ಹಾಗೂ ಕೌಟುಂಬಿಕ ಕಲಹ.
- ಕೇಸು ದಾಖಲಿಸುವ ವಿಚಾರದಲ್ಲಿ ಕಡಿಮೆ ಶಿಕ್ಷಣ ಹೊಂದಿರುವವರಿಗೆ ನೀವು ಹೇಗೆ ಸಹಾಯ ಮಾಡುತ್ತದೆ?
ಕಾನೂನು ಹಾಗೂ ಕೋರ್ಟ್ ಕಲಾಪಗಳ ಬಗ್ಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಹೇಳುವುದು ಹಾಗೂ ಸಂದರ್ಭಕ್ಕೆ ಅನುಗುಣವಾಗಿ ದೂರವಾಣಿ ಮೂಲಕ ಅಥವಾ ನೇರ ಭೇಟಿಯಾಗಿ ನೆರವು ಒದಗಿಸುವುದು.
- ಯಾವ ರೀತಿ ನೊಂದ ಮಹಿಳೆಯರನ್ನು ಸಮಸ್ಯೆಯ ವಿರುದ್ಧ ಹೋರಾಡಲು ಮಾನಸಿಕವಾಗಿ ತಯಾರು ಮಾಡುತ್ತೀರಿ?
ಆಪ್ತಸಮಾಲೋಚನೆ ನಡೆಸಿ ಆಕೆಯನ್ನು ತನ್ನ ಸಮಸ್ಯೆಯ ವಿರುದ್ಧ ಹೋರಾಡಲು ಶಕ್ತಳಾಗಿಸುವುದು.
- ನಗರ ಪ್ರದೇಶ ವಿದ್ಯಾವಂತ ವರ್ಗಗಳಲ್ಲಿ ಹೆಚ್ಚು ದೌರ್ಜನ್ಯ ಕಂಡು ಬರುತ್ತದೆಯೋ ಅಥವಾ ಗ್ರಾಮೀಣ ಪ್ರದೇಶಗಳಲ್ಲೋ?
ಗ್ರಾಮೀಣ ಪ್ರದೇಶಗಳಲ್ಲಿ.
- ದಾಖಲಾದ ಕೇಸುಗಳಲ್ಲಿ ಎಷ್ಟು ಪರ್ಸೆಂಟ್ ಮಹಿಳೆಯರಿಗೆ ಪರಿಹಾರ ದೊರಕುತ್ತದೆ?
ಶೇಕಡಾ 75
- ಮಹಿಳಾ ದಿನಾಚರಣೆಯ ಸಂದರ್ಭ ಯಾವ ವಿಚಾರದಲ್ಲಿ ಮಹಿಳೆ ದ್ವನಿ ಎತ್ತ ಬೇಕಾದ ಅವಶ್ಯಕತೆ ಇದೆ ಎಂದೆನಿಸುತ್ತದೆ?
ಕೌಟುಂಬಿಕ ಸಮಸ್ಯೆಯ ವಿರುದ್ಧ ಹಾಗೂ ಮಹಿಳಾ ಪರ ಕಾನೂನು ಬಗ್ಗೆ ಹಾಗೂ ಹೆಣ್ಣು ಮಕ್ಕಳ ರಕ್ಕಣೆಯ ಜಾಗೃತಿಯ ಬಗ್ಗೆ
ಮಂಗಳೂರಿನ ಸಖಿ ಕೇಂದ್ರದಲ್ಲಿ ಒಟ್ಟು ೨೦೧೯ ರ ಎಪ್ರಿಲ್ ನಿಂದ ೨೦೨೦ ರ ಮಾಚ್ ð ವರೆಗೆ ೧೨೧ ಮಹಿಳೆಯರಿಗೆ ವೈದ್ಯಕೀಯ, ೪೨ ಮಹಿಳೆಯರಿಗೆ ಪೋಲಿಸ್, ೮೭ ಮಹಿಳೆಯರಿಗೆ ಆಪ್ತ ಸಮಾಲೋಚನೆ, ೩೮ ಮಹಿಳೆಯರಿಗೆ ಕಾನೂನು ನೆರವು, ೫ ಮಹಿಳೆಯರಿಗೆ ತಾತ್ಕಾಲಿಕ ವಸತಿ ಒದಗಿಸಲಾಗಿದೆ. ೨೦೨೧ರ ಎಪ್ರಿಲ್ ನಿಂದ ೨೦೨೧ ರ ಡಿಸೆಂಬರ್ ವರೆಗೆ ೯೯ ಮಹಿಳೆಯರಿಗೆ ವೈದ್ಯಕೀಯ, ೮ ಮಹಿಳೆಯರಿಗೆ ಪೋಲಿಸ್ ನೆರವು, ೧೪೫ ಮಹಿಳೆಯರಿಗೆ ಆಪ್ತ ಸಮಾಲೋಚನೆ, ೮೧ ಮಹಿಳೆಯರಿಗೆ ಕಾನೂನು ನೆರವು, ೧೦ ಮಹಿಳೆಯರಿಗೆ ವಸತಿ ಒದಗಿಸಲಾಗಿದೆ.
ಹೆಣ್ಣು ಗಂಡಿನ ಎಲ್ಲ ಮೂಲಭೂತ ವ್ಯತ್ಯಾಸಗಳನ್ನು ಸಮಾನತೆಯ ಮಾಪನದಲ್ಲಿ ಅಳೆಯುವುದು ಸರಿಯಲ್ಲ. ಹೆಣ್ಣಿನ ದೈಹಿಕ ಸೂಕ್ಷ್ಮತೆ, ದೈಹಿಕ ರಚನೆ, ಋತುಚಕ್ರ ಮೊದಲಾದವುಗಳಿಗಾಗಿ ಕೆಲವು ವಿಶೇಷ ಸವಲತ್ತುಗಳಿಗೆ ಅವಳು ಹಕ್ಕುದಾರಳು ಎಂಬುದನ್ನು ಗಂಡು ಮರೆಯಬಾರದು. ಹೆಣ್ಣು ಮಗುವಿನ ದೈಹಿಕ ಸೂಕ್ಷ್ಮತೆಯನ್ನು ಅವಳ ದೌರ್ಬಲ್ಯವೆಂದು ಪರಿಗಣಿಸಬಾರದು. ಸೃಷ್ಟಿಯ ವಿಭಿನ್ನತೆ ಯನ್ನು ಎಲ್ಲರು ಅಥೈಸಿಕೊಂಡು ಸಮಾನತೆಯ ಪಥದಲ್ಲಿ ನಡೆಯಲು ಬದ್ಧರಾದಾಗ ಅದು ಅರ್ಥಪೂರ್ಣ ಮಹಿಳಾ ದಿನಾಚರಣೆ ಎನಿಸಿಕೊಳ್ಳುತ್ತದೆ