ರೈಲನ್ನೇ ತಳ್ಳಿದ ಪ್ರಯಾಣಿಕರು | ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್!
ಬಸ್, ಲಾರಿ ಸೇರಿ ಅನೇಕ ವಾಹನಗಳು ಸ್ಟಾರ್ಟ್ ಆಗದೇ ಇದ್ದಾಗ ಅದನ್ನು ಒಂದಷ್ಟು ಮಂದಿ ಸೇರಿ ತಳ್ಳುವುದು ನಾವು ನೋಡಿದ್ದೀವಿ. ಆದರೆ ಉತ್ತರಪ್ರದೇಶದ ಮೀರತ್ ಜಿಲ್ಲೆಯ ದೌರಾಲಾ ರೈಲ್ವೆ ಸ್ಟೇಶನ್ ನಲ್ಲಿ ಪ್ರಯಾಣಿಕರು ರೈಲನ್ನು ತಳ್ಳಬೇಕಾಗಿ ಬಂತು. ಅನೇಕ ಮಂದಿ ಸೇರಿ ಟ್ರೈನನ್ನು ತಳ್ಳಿದ್ದಾರೆ.
ದೌರಾಲಾ ರೈಲ್ವೆ ಸ್ಟೇಷನ್ ನಲ್ಲಿ ಈ ಕುತೂಹಲಕಾರಿ ಘಟನೆ ನಡೆದಿದೆ. ಸಹರಾನ್ ಪುರ- ದೆಹಲಿ ಪ್ರಯಾಣಿಕರ ರೈಲಿನ ಎಂಜಿನ್ ಮತ್ತು ಎರಡು ಕೋಚ್ ಗಳಿಗೆ ಬೆಂಕಿ ತಗುಲಿತ್ತು. ರೈಲು ನಿಂತಿದ್ದ ಕಾರಣ ಪ್ರಯಾಣಿಕರು ಕೋಚ್ ನಿಂದ ಇಳಿದು ಪ್ರಾಣರಕ್ಷಣೆ ಮಾಡಿಕೊಂಡಿದ್ದಾರೆ.
ಬೆಂಕಿ ತಗುಲಿದ ಎಂಜಿನ್ ಮತ್ತು ಎರಡು ಕಂಪಾರ್ಟ್ ಮೆಂಟ್ ಗಳನ್ನು ರೈಲಿನ ಉಳಿದ ಕಂಪಾರ್ಟ್ ಮೆಂಟ್ ನಿಂದ ಬೇರ್ಪಡಿಸಿ ದೂರ ಸರಿಸುವ ಕಾರಣಕ್ಕಾಗಿ ಪ್ರಯಾಣಿಕರೆಲ್ಲ ಸೇರಿ ತಳ್ಳಿದ್ದಾರೆ.
ಬೆಂಕಿ ತಗುಲಿದ ಕೋಚ್ ಗಳನ್ನು ಕೂಡಲೇ ಬೇರ್ಪಡಿಸದೆ ಇದ್ದರೆ, ಅದು ಇನ್ನಷ್ಟು ಬೋಗಿಗಳಿಗೆ ವ್ಯಾಪಿಸುವ ಸಾಧ್ಯತೆ ಇರುತ್ತದೆ. ಈ ಘಟನೆಯಲ್ಲಿ ಯಾರಿಗೂ ಪ್ರಾಣಹಾನಿಯಾಗಿಲ್ಲ.
ಫೆ.19 ರಂದು ಬಿಹಾರದ ಮಧುಬನಿ ರೈಲ್ವೆ ಸ್ಟೇಷನ್ ನಲ್ಲಿ ನಿಂತಿದ್ದ ಖಾಲಿ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿ ಆತಂಕ ಸೃಷ್ಟಿಸಿತ್ತು. ಬೆಳಗ್ಗೆ 9.13 ರ ಹೊತ್ತಿಗೆ ಸ್ವತಂತ್ರ ಸೇನಾನಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಆದರೆ ಪ್ರಯಾಣಿಕರು ಯಾರೂ ಇರದ ಕಾರಣ ಸಾವು ನೋವಿನ ವರದಿಯಾಗಿಲ್ಲ.
ಅಲ್ಲಿನ ಸಿಬ್ಬಂದಿ ಬಕೆಟ್ ಗಳ ಮೂಲಕ ನೀರು ಹಾಕಿ ಬೆಂಕಿ ನಂದಿಸಿದ್ದರು.