ಕುಂದಾಪುರ : ಜಾತ್ರೆ ಪ್ರಯುಕ್ತ ಫ್ಲೆಕ್ಸ್ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶ | ಯುವಕ ದಾರುಣ ಸಾವು!!

Share the Article

ಜಾತ್ರೆ ಪ್ರಯುಕ್ತ ಬ್ಯಾನರ್‌ ಅಳವಡಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಫ್ಲೆಕ್ಸ್‌ ಗೆ ವಿದ್ಯುತ್‌ ತಂತಿಗೆ ತಗುಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಕುಂದಾಪುರದ ಸೌಕೂರು ದೇವಸ್ಥಾನದ ಸಮೀಪದಲ್ಲಿ ನಡೆದಿದೆ.

ಸೌಕೂರು ನಿವಾಸಿ ಮೋಹನ ದೇವಾಡಿಗ ಅವರ ಪುತ್ರ ಪ್ರಶಾಂತ ದೇವಾಡಿಗ (26) ಮೃತ ಯುವಕ. ಘಟನೆಯಲ್ಲಿ ಶ್ರೀಧರ ದೇವಾಡಿಗ (45) ಗಂಭೀರ ಗಾಯಗೊಂಡು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶನಿವಾರ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೆವಸ್ಥಾನದ ವಾರ್ಷಿಕ ಜಾತ್ರೆ ಜರುಗಲಿದ್ದು, ಆ ಪ್ರಯುಕ್ತ ಶುಕ್ರವಾರ ರಾತ್ರಿ ಹಬ್ಬಕ್ಕೆ ಶುಭಕೋರುವ ತಮ್ಮದೇ ಬ್ಯಾನರ್‌ ಅನ್ನು ಅಳವಡಿಸುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ನಡೆದಿದೆ.

ಫ್ಲೆಕ್ಸ್‌ ಕಟ್ಟುತ್ತಿದ್ದ ಸ್ಥಳದ ಸಮೀಪವೇ ಟ್ರಾನ್ಸ್‌ಫಾರ್ಮರ್‌ ತಂತಿ ಹಾದು ಹೋಗಿದ್ದು, ಅದರ ಅರವಿಗೆ ಬಾರದೇ ಫ್ಲೆಕ್ಸ್‌ ಮೇಲಕ್ಕೆತ್ತಿ ಕಟ್ಟುತ್ತಿದ್ದ ಸಂದರ್ಭದಲ್ಲಿ ವಿದ್ಯುತ್‌ ತಂತಿ ತಗುಲಿದೆ. ಕೂಡಲೇ ಇಬ್ಬರನ್ನು ರಕ್ಷಿಸುವ ಪ್ರಯತ್ನ ನಡೆಸಲಾಯಿತಾದರೂ ಅಷ್ಟರಲ್ಲಾಗಲೇ ಪ್ರಶಾಂತ ದೇವಾಡಿಗ ಕೊನೆಯುಸಿರೆಳೆದಿದ್ದಾರೆ. ಇನ್ನು ಗಂಭೀರ ಗಾಯಗೊಂಡ ಶ್ರೀಧರ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಊರ ಹಬ್ಬದ ಸಂಭ್ರಮದಲ್ಲಿದ್ದ ಪ್ರಶಾಂತ್‌ ಮನೆಯಲ್ಲಿ ಸೂತಕದ ಛಾಯೆ ಮೂಡಿದ್ದು, ಕುಟುಂಬಿಕರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳೀಯ ಸೊಸೈಟಿವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪ್ರಶಾಂತ್‌ ಊರ ಸಾಮಾಜಿಕ, ಧಾಮಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ಅವರ ಹಠಾತ್‌ ಸಾವು ಕುಟುಂಬಿಕರು ಹಾಗೂ ಅವರ ಸ್ನೇಹ ಬಳಗವನ್ನು ಕಣ್ಣೀರಗಡಲಲ್ಲಿ ತೇಲಿಸುವಂತೆ ಮಾಡಿದೆ.

Leave A Reply