ಹಿಂದೂ ದೇವಾಲಯದ ಮೇಲೆ ಮುಸ್ಲಿಂ ಸಮುದಾಯದ ಬಾವುಟ!! ಎಡಿಟ್ ಮಾಡಿ ಹರಿಯಬಿಟ್ಟ ಟ್ರೊಲ್ ಪೇಜ್ ವಿರುದ್ಧ ಪ್ರಕರಣ ದಾಖಲು

ಮಂಗಳೂರು : ‘ ಟ್ರೋಲ್ ಕಿಂಗ್ 193’ ಇನ್ಸ್ಟಾಗ್ರಾಂ ನ ಪೇಜ್ ಮೂಲಕ ಧಾರ್ಮಿಕ ಕೇಂದ್ರಗಳ ಕುರಿತು ಆಕ್ಷೇಪಾರ್ಹ ಪೋಸ್ಟ್ ಗಳನ್ನು ಮಾಡಿರುವ ಬಗ್ಗೆ ಮಂಗಳೂರು ನಿವಾಸಿಯೊಬ್ಬರ ದೂರಿನ ಮೇರೆಗೆ ಪೇಜ್ ನ ಅಡ್ಮಿನ್, ಅಪ್ರಾಪ್ತ ವಯಸ್ಸಿನ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು, 17 ರ ಹರೆಯದ ಯುವಕ ಎಡಿಟ್ ಮಾಡಿದ ವೀಡಿಯೋಗಳನ್ನು ಇನ್ಸ್ಟಾಗ್ರಾಂ ಪೇಜ್ ನಲ್ಲಿ ಅಪ್ಲೋಡ್ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ತನ್ನ ಸ್ನೇಹಿತರೊಂದಿಗೆ ಇನ್ಸ್ಟಾಗ್ರಾಂ ಪೇಜ್ ನೋಡುತ್ತಿದ್ದಾಗ, ‘ ಟ್ರೋಲ್ ಕಿಂಗ್ 193’ ಖಾತೆಯಲ್ಲಿ ಹಿಂದೂ ದೇವಾಲಯದ ಗೋಪುರದ ಮೇಲೆ ಹಸಿರು ಬಾವುಟ ಹಾರಾಟ ಮಾಡಿರುವ ವೀಡಿಯೋ ಅಪ್ಲೋಡ್ ಮಾಡಿದ್ದು, ಇದನ್ನು ಕಂಡ ಮಂಗಳೂರಿನ ನಿವಾಸಿಯೊಬ್ಬರು ಮನಸ್ಸಿಗೆ ತುಂಬಾ ನೋವಾಗಿರುವುದಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ಈ ಬಗ್ಗೆ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ತಂಡ ಪರಿಶೀಲನೆ ನಡೆಸಿದಾಗ ಈ ಪೇಜ್ ಎಸ್ಸೆಸ್ಸೆಲ್ಸಿಯಲ್ಲಿ ಫೇಲ್ ಆಗಿರುವ ಯುವಕನದ್ದು ಎಂದು ತಿಳಿಯುತ್ತದೆ. ಮಂಗಳೂರು ಕೊಣಾಜೆ ನಿವಾಸಿಯಾಗಿರುವ ಈತ ಬೆಂಗಳೂರಿನಲ್ಲಿ ತರಕಾರಿ ಮಂಡಿಯಲ್ಲಿ ಕೆಲಸ ಮಾಡುತ್ತಿರುವುದು ತಿಳಿದು ಬಂದಿದೆ. ಈ ರೀತಿ ಮಾಡಲು ಬೇರೆ ಯಾರಾದಾದರೂ ಬೆಂಬಲವಿತ್ತೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಪೊಲೀಸ್ ವಿಚಾರಣೆಯಲ್ಲಿ ಈತ ಈ ಪೇಜ್ ನಲ್ಲಿ ತಾನೇ ಈ ಪೋಸ್ಟ್ ಗಳನ್ನು ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.

Leave A Reply

Your email address will not be published.