ಮಲಯಾಳಂ ಭಾಷೆ ಗೊತ್ತಿದ್ದರೆ ಮಾತ್ರ ಸರ್ಕಾರಿ ಉದ್ಯೋಗ – ಪಿಣರಾಯಿ ವಿಜಯನ್ !! | ಗಡಿಭಾಗದ ಕನ್ನಡಿಗರಲ್ಲಿ ಹೆಚ್ಚಿದ ಆತಂಕ
ಕೇರಳ ಸರ್ಕಾರ ಒಂದಿಲ್ಲೊಂದು ರೀತಿಯಲ್ಲಿ ಕನ್ನಡಿಗರಿಗೆ ತೊಂದರೆ ನೀಡುತ್ತಾ ಬಂದಿದೆ. ಇದೀಗ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಲಯಾಳಂ ಭಾಷೆ ಗೊತ್ತಿದ್ದರೆ ಮಾತ್ರ ಕೇರಳದಲ್ಲಿ ಸರ್ಕಾರಿ ಉದ್ಯೋಗ ಎಂಬ ಹೇಳಿಕೆ ಕೊಟ್ಟಿರುವುದು ಕಾಸರಗೋಡು ಹಾಗೂ ಸುತ್ತಮುತ್ತ ಇರುವ ಅಲ್ಪಸಂಖ್ಯಾತ ಕನ್ನಡಿಗರಲ್ಲಿ ಆತಂಕ ಉಂಟು ಮಾಡಿದೆ.
ಇದುವರೆಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಪ್ರದೇಶದಲ್ಲಿ ಮಲಯಾಳಂ ಭಾಷೆಯಿಂದ ವಿನಾಯತಿ ಇದ್ದು ಅದು ಮುಂದುವರೆಯಬೇಕಾಗಿದೆ. ಒಂದು ವೇಳೆ ಕಾಸರಗೋಡಿನ ಕನ್ನಡಿಗರಿಗೂ ಮಲಯಾಳಂ ಭಾಷೆಯನ್ನು ಉದ್ಯೋಗದ ದೃಷ್ಟಿಯಿಂದ ಕಡ್ಡಾಯ ಮಾಡಿದರೆ ಅದು ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ನೀಡಿದ ರಕ್ಷಣೆಯ ಉಲ್ಲಂಘನೆ ಆಗುತ್ತದೆ.
ದಯವಿಟ್ಟು ಕೇರಳ ಸರ್ಕಾರ ಕಾಸರಗೋಡಿನ ಕನ್ನಡಿಗರ ಉದ್ಯೋಗಕ್ಕೆ ಬಾಧಕ ಆಗುವಂತೆ ಯಾವುದೇ ರೀತಿಯಲ್ಲಿಯೂ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸದಿರಲು ಕೇರಳ ಸರ್ಕಾರದ ಮುಖ್ಯಮಂತ್ರಿಗಳನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಮೂಲಕ ಆಗ್ರಹ ಪೂರ್ವಕವಾಗಿ ಒತ್ತಾಯಿಸುತ್ತದೆ. ಒಂದು ವೇಳೆ ಕನ್ನಡಿಗರಿಗೆ ಇರುವ ಸಂವಿಧಾನಾತ್ಮಕ ರಕ್ಷಣೆಯ ಉಲ್ಲಂಘನೆ ಆದರೆ ಕಾನೂನಾತ್ಮಕ ಹೋರಾಟ ನಡೆಸಬೇಕಾಗುತ್ತದೆ ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ.