ಬಾಡಿ ಹೋದ ಮೊಗದಲ್ಲಿ ನಗು ತರಿಸುವ ನಿಸ್ವಾರ್ಥ ಸೇವೆಯ ದಾನಿ | ಬರಿಗಾಲಲ್ಲಿ ನಡೆದಾಡೋ ಮಕ್ಕಳನ್ನು ಕಂಡೊಡನೆ ತೆರೆಯುತ್ತೆ ಇವರ ಕಾರಿನ ಡಿಕ್ಕಿ | ಈ ಕರುಣಾಮಯಿಯ ಇಂಟರೆಸ್ಟಿಂಗ್ ಸ್ಟೋರಿ ನಿಮಗಾಗಿ

ನಮ್ಮಲ್ಲಿ ಅದೆಷ್ಟು ಆಸ್ತಿ, ಹಣಗಳಿದ್ದರೆ ಏನು ಉಪಯೋಗ? ಒಳ್ಳೆಯ ಮನಸ್ಸು ಇಲ್ಲದಿದ್ದರೆ!!. ಅದೆಷ್ಟೋ ಮಂದಿ ತಮಗೆ ಎಷ್ಟಿದ್ದರೂ ಇನ್ನೂ ಬೇಕು ಇನ್ನೂ ಬೇಕು ಎಂಬ ಮನಸ್ಥಿತಿಲೇ ಇರುತ್ತಾರೆ. ಅದರ ಹೊರತು ನಮ್ಮ ಪಾಲಿಗೆ ಇದ್ದಿದ್ದು ಇನ್ನೊಬ್ಬರ ಪಾಲಿಗೆ ಇಲ್ಲ ಎಂಬ ಯೋಚನೆಯೇ ಬಾರದಂತಿದೆ.ಆದರೆ ಈ ಕಾರಿಗೆ ಮಾತ್ರ ಒಳ್ಳೆಯ ವ್ಯಕ್ತಿತ್ವ ಇದ್ದು, ಇನ್ನೊಂದು ಜೀವ ಅಳುತಿದ್ದರೆ ಸಮಾಧಾನಗೊಳಿಸೋ ಹೃದಯ.

ಹೌದು. ನಾನು ಹೇಳಲು ಹೊರಟಿರೋದು ನಿಸ್ವಾರ್ಥ ಸೇವೆಯ ಒಬ್ಬ ದಾನಿಯ ಬಗ್ಗೆ.ಈ ನಗುವನ್ನು ಹಂಚುವ ಕಾರು ಅದೆಷ್ಟೋ ಜನರ ಬಾಳಿಗೆ ಬೆಳಕಾಗಿದ್ದು, ಇದೀಗ ಬರಿಗಾಲಿನಲ್ಲಿ ನಡೆಯುವ ಮಕ್ಕಳನ್ನು ಕಂಡರೆ ಈ ಕಾರು ನಿಲ್ಲುವ ಮೂಲಕ ಬಾಡಿ ಹೋದ ಮೊಗದಲ್ಲಿ ನಗು ತರಿಸುತ್ತಿದೆ.ಈ ಕಾರಿನ ಹಿಂದಿರುವ ವಿಶಾಲವಾದ ಕೈಯೇ,ಮಂಗಳೂರಿನ ಕಂಪ್ಯೂಟರ್‌ ಎಂಜಿನಿಯರಿಂಗ್‌ ಪ್ರೊಫೆಸರ್‌, ಸೈಬರ್‌ ಭದ್ರತಾ ತಜ್ಞ ಡಾ| ಅನಂತ ಪ್ರಭು ಗುರುಪುರ ಅವರದ್ದಾಗಿದ್ದು, ಇದು ಸಮಾಜಸೇವೆಗೆ ಆಯ್ದುಕೊಂಡಿರುವ ಹೊಸ ವಿಧಾನ.

ಈಗಾಗಲೇ ಮಕ್ಕಳಿಗೆ ಸ್ಲೇಟ್‌ ಮತ್ತಿತರ ಪರಿಕರ, ರಸ್ತೆ ಬದಿ ಬಿಸಿನಲ್ಲಿರುವ ವ್ಯಾಪಾರಿಗಳಿಗೆ ಕೊಡೆ, ಕೋವಿಡ್‌ ಸಂದರ್ಭ ಆಹಾರ ಕಿಟ್‌ ಮೊದಲಾದವುಗಳನ್ನು ನೀಡುತ್ತಾ ಬಂದಿರುವ ಅನಂತ ಪ್ರಭು ಅವರು ಸದ್ಯ ತಮ್ಮ ಕಾರಿನಲ್ಲಿ ಚಪ್ಪಲಿಗಳನ್ನು ತುಂಬಿಸಿಕೊಂಡಿದ್ದಾರೆ.ಬರಿ ಕಾಲಲ್ಲೇ ಇರೋ ಮಕ್ಕಳನ್ನು ಕಂಡೊಡನೆ ಈ ಕಾರಿನ ಢಿಕ್ಕಿ ತೆರೆದುಕೊಳ್ಳುತ್ತದೆ. ಮಕ್ಕಳು ಬೇಕಾದ ಚಪ್ಪಲಿಗಳನ್ನು ಆಯ್ದುಕೊಳ್ಳುತ್ತಾರೆ, ಕಾಲಿಗೆ ಹಾಕಿ ಸಂಭ್ರಮಿಸುತ್ತಾರೆ, ಕಾರು ಮುಂದೆ ಸಾಗುತ್ತದೆ… ಮಕ್ಕಳ ಕಾಲಿಗೆ ಸರಿ ಹೊಂದುವ ಗಾತ್ರವನ್ನು ಆಯ್ದುಕೊಳ್ಳಲು ಅನುಕೂಲವಾಗುವಂತೆ 50 ವಿಭಿನ್ನ ಗಾತ್ರದ ಚಪ್ಪಲಿಗಳನ್ನು ಇಟ್ಟುಕೊಂಡಿದ್ದಾರೆ. ಇವೆಲ್ಲವೂ ಹವಾಯಿ ಚಪ್ಪಲಿಗಳು. ಮಕ್ಕಳೇ ಚಪ್ಪಲಿಗಳನ್ನು ನೋಡಿ ಅವರಿಗೆ ಬೇಕಾದುದನ್ನು ಆಯ್ದುಕೊಳ್ಳಲು ಅವಕಾಶ ನೀಡುತ್ತಾರೆ.

“ನಾನು ಕಾರ್ಯನಿಮಿತ್ತ ಮಂಗಳೂರು ಮಾತ್ರವಲ್ಲದೆ ರಾಜ್ಯಾದ್ಯಂತ ಕಾರಿನಲ್ಲಿ ಹೋಗುತ್ತಿರುತ್ತೇನೆ. ಅಲ್ಲಲ್ಲಿ ಮಕ್ಕಳು ಬರಿಗಾಲಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುವುದನ್ನು ಕಂಡಿದ್ದೇನೆ. ಇಂತಹ ಮಕ್ಕಳಿಗೆ ಚಪ್ಪಲಿ ಕೊಡಬೇಕು ಎಂದು ಯೋಚಿಸುತ್ತಿದ್ದೆ. ಇತ್ತೀಚೆಗೆ ಅದನ್ನು ಕಾರ್ಯಗತಗೊಳಿಸಲು ಆರಂಭಿಸಿ ಚಪ್ಪಲಿಗಳನ್ನು ಖರೀದಿಸಿದ್ದೇನೆ. ನನ್ನ ಉದ್ದೇಶ ಅರಿತ ವ್ಯಾಪಾರಿಯೋರ್ವರು ಸ್ವಲ್ಪ ಕಡಿಮೆ ಬೆಲೆಗೆ ಚಪ್ಪಲಿಗಳನ್ನು ನೀಡಿದ್ದಾರೆ. ಸದ್ಯ ಹವಾಯಿ ಚಪ್ಪಲಿಗಳನ್ನು ನೀಡುತ್ತಿದ್ದೇನೆ. ಮುಂದೆ ಮಳೆಗಾಲಕ್ಕೂ ಅನುಕೂಲವಾಗುವಂತೆ ಸ್ಯಾಂಡಲ್ಸ್‌ ಚಪ್ಪಲಿ ನೀಡುವ ಉದ್ದೇಶವಿದೆ’ ಎನ್ನುತ್ತಾರೆ ಡಾ| ಅನಂತ ಪ್ರಭು ಅವರು.

Leave A Reply

Your email address will not be published.