IPL 2022 : ಬಹು ನಿರೀಕ್ಷಿತ ಐಪಿಎಲ್ ಟೂರ್ನಿ ಮಾರ್ಚ್ 26 ರಿಂದ ಪ್ರಾರಂಭ
ಇಂಡಿಯನ್ ಪ್ರೀಮಿಯರ್ ಲೀಗ್ 2022 ಪ್ರಾರಂಭಕ್ಕಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇಲ್ಲಿಯವರೆಗೆ ಪಂದ್ಯಾವಳಿಯ ವೇಳಾಪಟ್ಟಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ. ಕ್ರಿಕೆಟ್ ಅಭಿಮಾನಿಗಳಿಗೆ ಈಗೊಂದು ಸಿಹಿಸುದ್ದಿ ದೊರಕಿದೆ. ಪಂದ್ಯಾವಳಿಯ ಆರಂಭದ ದಿನಾಂಕವನ್ನು ಬಿಡುಗಡೆ ಮಾಡಿದೆ. ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಗುರುವಾರ ( ಫೆ.24) ಮಹತ್ವದ ಸಭೆ ನಡೆಸಿ ಐಪಿಎಲ್ 2022 ಟೂರ್ನಿಯನ್ನು ಮಾರ್ಚ್ 26 ( ಶನಿವಾರ) ರಂದು ಶುರುಮಾಡಲು ನಿರ್ಧರಿಸಿದೆ.
ಹತ್ತು ತಂಡಗಳಿರುವ ಈ ದೊಡ್ಡ ಮತ್ತು ಸುದೀರ್ಘ ಪಂದ್ಯಾವಳಿಯನ್ನು ಮುಂಬೈ ಮತ್ತು ಪುಣೆಯ 4 ಕ್ರೀಡಾಂಗಣಗಳಲ್ಲಿ ಮಾತ್ರ ಆಯೋಜಿಸಲಾಗುತ್ತದೆ. ಈ ಬಾರಿಯ ಪಂದ್ಯಾವಳಿಯನ್ನು ಅಭಿಮಾನಿಗಳ ಉಪಸ್ಥಿತಿಯಿಲ್ಲದೇ ಆಯೋಜಿಸಲಾಗುವುದಿಲ್ಲ.
ಮಹಾರಾಷ್ಟ್ರ ಸರಕಾರದ ಮಾರ್ಗಸೂಚಿಗಳ ಆಧಾರದ ಮೇಲೆ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರಲು ಬಿಸಿಸಿಐ ಸಿದ್ಧವಾಗಿದೆ.
ಆನ್ಲೈನ್ ಮೂಲಕ ಐಪಿಎಲ್ ಆಡಳಿತ ಮಂಡಳಿ ಸಭೆಯನ್ನು ಗುರುವಾರ ನಡೆಸಲಾಗಿದೆ. ವರದಿಗಳ ಪ್ರಕಾರ ಲೀಗ್ ಹಂತದಲ್ಲಿದ್ದ ಒಟ್ಟು 70 ಪಂದ್ಯಗಳಲ್ಲಿ 55 ಪಂದ್ಯಗಳು ಮುಂಬೈನಲ್ಲಿ ಮತ್ತು 15 ಲೀಗ್ ಪಂದ್ಯಗಳು ಪುಣೆಯಲ್ಲಿ ಆಯೋಜನೆ ಆಗಲಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣ ಮತ್ತು ಬ್ರಬೋರ್ನ್ ಕ್ರೀಡಾಂಗಣದಲ್ಲಿ ತಲಾ 20 ಪಂದ್ಯಗಳು ನಡೆಯಲಿದ್ದು, 15 ಪಂದ್ಯಗಳಿಗೆ ಮುಂಬೈನ ಡಿ.ವೈ.ಪಾಟಿಲ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಅನಂತರ 15 ಪಂದ್ಯಗಳ ಸಲುವಾಗಿ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ( ಎಂಸಿಎ) ವನ್ನು ಆಯ್ಕೆ ಮಾಡಲಾಗಿದೆ.
ಶೀಘ್ರವೇ ಪೂರ್ಣ ಪ್ರಮಾಣದಲ್ಲಿ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು. ಮಹಾರಾಷ್ಟ್ರ ಸರಕಾರದ ನೀತಿ ನಿಯಮಗಳಿಗೆ ಅನುಗುಣವಾಗಿ ಈ ಬಾರಿ ಕೆಲ ಸಂಖ್ಯೆಯ ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶಿಸಲು ಅವಕಾಶವಿದೆ. ಅದು ಶೇ.25 ಅಥವಾ ಶೇ.50 ರಷ್ಟು ಕೂಡಾ ಆಗಿರಬಹುದು. ಈ ನಿರ್ಧಾರ ಮಹಾರಾಷ್ಟ್ರ ಸರಕಾರ ತೆಗೆದುಕೊಳ್ಳಲಿದೆ.
ಈ ಬಾರಿ ಒಟ್ಟು ಹತ್ತು ತಂಡಗಳು ಇವೆ. ಹೀಗಾಗಿ ಹೆಚ್ಚಿನ ಪಂದ್ಯಗಳು ನಡೆಯಲಿದೆ. ಈ ಸಲುವಾಗಿ ಎಷ್ಟು ದಿನಗಳ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಲಿದೆ ಎಂಬ ಕುತೂಹಲ ಹೆಚ್ಚಾಗಿದೆ.