ಹಾವಿನ ದ್ವೇಷ ಹನ್ನೆರಡು ವರುಷ: ಕೃಷಿ ಕುಟುಂಬದ ಎಲ್ಲರಿಗೂ ಪದೇ ಪದೇ ಕಚ್ಚುತ್ತಿರುವ ನಾಗಪ್ಪ| ಚಿಕಿತ್ಸೆ ಪಡೆದು ಮನೆಗೆ ವಾಪಾಸಾಗುತ್ತಿದ್ದಂತೆ ಕಣ್ಣಿಗೆ ಕಾಣದೆ ಬಂದು ಕಚ್ಚುವ ನಾಗರಾಜ
ಹಾವಿನ ದ್ವೇಷ ಹನ್ನೆರಡು ವರ್ಷ ಎಂದು ಕೇಳಿದ್ದೇವೆ. ಆದರೆ ಇದು ನಿಜ ಹೌದೋ ಅಲ್ಲವೋ ಎಂಬುದಕ್ಕೆ ಉದಾಹರಣೆಯಾಗಿ ಇಲ್ಲೊಂದು ಘಟನೆ ನಡೆದಿದೆ.
ಆಧುನಿಕತೆ ವಿಜ್ಞಾನ ಏನೇ ಹೇಳಿದರೂ ನಂಬಿಕೆಗಳನ್ನು ನಂಬದಿದ್ದರೆ ಕೆಲವೊಮ್ಮೆ ನಡೆಯುವ ಘಟನೆಗಳು ಯಾರ ಊಹೆಗೂ ನಿಲುಕುವುದಿಲ್ಲ. ಅಂಥದ್ದೇ ಒಂದು ಘಟನೆ ನಡೆದಿರುವುದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ವಲಯದಲ್ಲಿ. ಒಂದು ತಿಂಗಳ ಅವಧಿಯಲ್ಲಿ ಒಂದೇ ಕುಟುಂಬದ ಮೂವರನ್ನು ಎರಡೆರಡು ಬಾರಿ ಹಾವು ಕಚ್ಚಿದೆ.
ವೆಂಕಟೇಶ್ ಮತ್ತು ವೆಂಕಟಮ್ಮ ದಂಪತಿ ಕುಟುಂಬಸ್ಥರಿಗೆ ಹಾವಿನ ಸಮಸ್ಯೆ ಕಾಡಿದೆ. ಡೋರ್ನಕಂಬಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಮ್ಮ ಮಗ ಜಗದೀಶ್ ಜೊತೆ ಈ ದಂಪತಿ ನೆಲೆಸಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ಇವರು ಮನೆಯಲ್ಲಿದ್ದಾಗ ಹಾವೊಂದು ಬಂದು ಮೂವರನ್ನು ಕಚ್ಚಿದೆ. ಕೂಡಲೇ ಸ್ಥಳೀಯರು ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಎಲ್ಲರೂ ಚಿಕಿತ್ಸೆ ತೆಗೆದುಕೊಂಡು ಪಾರಾಗಿ ಬಂದಿದ್ದಾರೆ. ಆದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಬಂದ ನಂತರ ಹಾವು ಪುನಃ ಕಚ್ಚಿದೆ. ಮತ್ತೊಮ್ಮೆ ಎಲ್ಲರಿಗೂ ಚಿಕಿತ್ಸೆ ನೀಡಲಾಗಿತ್ತು. ಮತ್ತೆ ಮನೆಗೆ ಬಂದಾಗ ಇದೇ ಸಮಸ್ಯೆ ಎದುರಾಗಿದೆ.
ಕುಟುಂಬಸ್ಥರ ಸಂಕಟ ಹೇಳತೀರದು. ಕೃಷಿಕರಾಗಿರುವ ಈ ಕುಟುಂಬಸ್ಥರು ತಮ್ಮ ಕೃಷಿಭೂಮಿಯಲ್ಲಿ ನಾಗರಹಾವಿಗೆ ಹಾನಿ ಮಾಡಿರುವ ಕಾರಣ, ಹೀಗೆ ಸಮಸ್ಯೆ ಆಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಹಾವು ಮಾತ್ರ ಕಣ್ಣಿಗೆ ಕಾಣದೆ ಪದೇ ಪದೇ ಕಚ್ಚುತ್ತಿದೆ ಎಂದು ಕುಟುಂಬಸ್ಥರ ಆಕ್ರಂದನ. ಇದೀಗ ಈ ಕುಟುಂಬ ಹಾವಿನ ಕಿರುಕುಳದಿಂದ ನಮ್ಮನ್ನು ರಕ್ಷಿಸಿ ಎಂದು ಸರಕಾರಕ್ಕೆ ಮನವಿ ಮಾಡುತ್ತಿದ್ದಾರೆ.